ADVERTISEMENT

ಜಂಪಿಂಗ್ ಸಿದ್ದರಾಮಯ್ಯ: ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 6:10 IST
Last Updated 24 ನವೆಂಬರ್ 2019, 6:10 IST
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಸ್.ಟಿ.ಸೋಮಶೇಖರ್ ಮಾತನಾಡಿದರು. ಜಗ್ಗೇಶ್, ಸಚಿವ ಆರ್.ಅಶೋಕ, ಶೋಭಾ ಕರಂದ್ಲಾಜೆ ಮತ್ತಿತರರು ಇದ್ದಾರೆ
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಸ್.ಟಿ.ಸೋಮಶೇಖರ್ ಮಾತನಾಡಿದರು. ಜಗ್ಗೇಶ್, ಸಚಿವ ಆರ್.ಅಶೋಕ, ಶೋಭಾ ಕರಂದ್ಲಾಜೆ ಮತ್ತಿತರರು ಇದ್ದಾರೆ   

ಕೆಂಗೇರಿ: ‘ಪಕ್ಷಾಂತರವನ್ನು ಟೀಕಿಸುವ ಸಿದ್ದರಾಮಯ್ಯ ಅವರೇ ಒಂದು ಪಕ್ಷದಲ್ಲಿ ನೆಲೆ ನಿಂತಿಲ್ಲ. ಅವರು ಜಂಪಿಂಗ್ ಸಿದ್ದರಾಮಯ್ಯ’ ಎಂದು ಸಚಿವ ಆರ್. ಅಶೋಕ ವ್ಯಂಗ್ಯವಾಡಿದರು.

ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಾಳ್ಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಮೊದಲು ಪಕ್ಷೇತರರಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ನಂತರ ಜೆಡಿಎಸ್‌ನಲ್ಲಿದ್ದರು. ಈಗ ಕಾಂಗ್ರೆಸಿಗ
ರಾಗಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನ ಸಿಗದಿದ್ದರೆ ಯಾವ ಪಕ್ಷಕ್ಕೆ ಹಾರುತ್ತಿದ್ದರೋ ಏನೊ’ ಎಂದು ಕುಟುಕಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷದಲ್ಲೇ ಸಿದ್ದರಾಮಯ್ಯ ಅವರಿಗೆ ವಿರೋಧವಿದೆ. ಒಬ್ಬಂಟಿಯಾಗಿರುವ ಅವರು ತಮ್ಮ ಪಕ್ಷದ ಮುಖಂಡರನ್ನು ಸಂಭಾಳಿಸು
ವುದಕ್ಕೇ ಹೆಣಗಾಡುತ್ತಿದ್ದಾರೆ’ ಎಂದು ಹೇಳಿದರು.

‘ಯಶವಂತಪುರ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಯಾಗಿದ್ದಾಗ ನಾನು ಹೆಚ್ಚಿನ ಅನುದಾನ ನೀಡಿದ್ದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌, ‘ಅವರು ಮುಖ್ಯಮಂತ್ರಿ ಆಗಲು ಬೆಂಬಲ ನೀಡಿದ ಶಾಸಕರಲ್ಲಿ ನಾನೂ ಒಬ್ಬ. ಪ್ರತಿ ಕ್ಷೇತ್ರಗಳಿಗೆ ಅನುದಾನ ನೀಡಬೇಕಾದುದು ಮುಖ್ಯಮಂತ್ರಿ ಕರ್ತವ್ಯ. ಅಭಿವೃದ್ಧಿ ಮಾಡಬೇಕಾಗಿದ್ದು ಶಾಸಕರ ಕರ್ತವ್ಯ’ ಎಂದರು.

‘ಬಿಡಿಎಗೆ ಸಂಬಂಧಿಸಿದ ಕಡತಗಳಿಗೆ ನಟಿಯೊಬ್ಬರು ಹೊಟೇಲ್‌ನಲ್ಲಿ ಆಗಿನ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರಿಂದ ಸಹಿ ಪಡೆದಿದ್ದಾರೆ ಎಂದು ನಾನು ಹೇಳಿಕೆ ನೀಡಿದ್ದೆ. ಎಚ್.ಡಿ.ಕುಮಾರಸ್ವಾಮಿ ಹೆಸರು ಎಲ್ಲೂ ಹೇಳಿರಲಿಲ್ಲ. ಬಿಡಿಎ ಅಧ್ಯಕ್ಷನಾಗಿ ನಾನು ಇದನ್ನೇ ಪ್ರಶ್ನಿಸಿದ್ದು ತಪ್ಪೇ’ ಎಂದು ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ನಟ ಜಗ್ಗೇಶ್, ‘ಕಳೆದ ಚುನಾವಣೆಯಲ್ಲಿ ಸೋಮಶೇಖರ್ ಅರ್ಜುನನ ರೀತಿ ನಿಂತಿದ್ದರು. ನಾನು ಬಬ್ರುವಾಹನನ ರೀತಿಯಲ್ಲಿ ಯುದ್ಧ ಸಾರಿದ್ದೆ. ಸುಭದ್ರ ಸರ್ಕಾರಕ್ಕಾಗಿ ಇಂದು ಜೊತೆಯಾಗಿ ನಾವಿಬ್ಬರು ಹೆಗಲ ಮೇಲೆ ಕೈ ಹಾಕಿ ನಿಂತಿದ್ದೇವೆ. ಬಿಜೆಪಿ ಅಭ್ಯರ್ಥಿ
ಯನ್ನು ಹರಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.