ಬೆಂಗಳೂರು: ‘ಪರಿಶಿಷ್ಟರ ಒಳಮೀಸಲಾತಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ಸಮೀಕ್ಷೆ ಕಾಟಾಚಾರದ ಮತ್ತು ಬೂಟಾಟಿಕೆಯ ಸಮೀಕ್ಷೆ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.
‘ತೋರಿಕೆಯ ಜಾತಿ ಸಮೀಕ್ಷೆ ಏಕೆ ಮಾಡುತ್ತಿದ್ದೀರಿ? ಇದು ಯಾವ ಪುರುಷಾರ್ಥಕ್ಕೆ ಮತ್ತು ಯಾರ ಲಾಭಕ್ಕೆ’ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಎಕ್ಸ್’ ಮೂಲಕ ಪ್ರಶ್ನಿಸಿದ್ದಾರೆ.
‘ಸಮೀಕ್ಷೆ ನಡೆಸಬೇಕಾದ ಸಿಬ್ಬಂದಿ ಮನೆ ಮನೆಗೆ ಹೋಗದೇ ಜನರನ್ನು ಸಂಪರ್ಕಿಸದೇ, ಕೇವಲ ಬಾಗಿಲಿಗೆ ‘ಸಮೀಕ್ಷೆ ಪೂರ್ಣ’ ಎನ್ನುವ ಸ್ಟಿಕರ್ ಅಂಟಿಸುತ್ತಿದ್ದಾರೆ. ಜನರ ಜಾತಿಯ ಬಗ್ಗೆ ಕೇಳದೆ, ಮಾಹಿತಿ ಸಂಗ್ರಹಿಸದೇ ನಡೆಯುತ್ತಿರುವ ಇದನ್ನು ಸಮೀಕ್ಷೆ ಎನ್ನಲು ಸಾಧ್ಯವೇ? ಇದು ಸಮೀಕ್ಷೆ ಅಲ್ಲ, ಇದು ಸರ್ಕಾರ ನಿರ್ದೇಶಿತ ಹಗರಣ’ ಎಂದು ಅಶೋಕ ಹೇಳಿದ್ದಾರೆ.
‘ಜಾತಿ ಗಣತಿ ಹೆಸರಿನಲ್ಲಿ ಈಗಾಗಲೇ ₹162 ಕೋಟಿ ಪೋಲು ಮಾಡಿದ್ದೀರಿ. ಈಗ ಒಳಮೀಸಲಾತಿಗಾಗಿ ಮಾಡುತ್ತಿರುವ ಸಮೀಕ್ಷೆಯ ಹೆಸರಿನಲ್ಲಿ ಇನ್ನೊಂದಿಷ್ಟು ಕೋಟಿ ಲೂಟಿ. ಇದು ಯಾವ ಸೀಮೆಯ ಸಾಮಾಜಿಕ ನ್ಯಾಯ? ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದೆ’ ಎಂದು ಹರಿಹಾಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.