ADVERTISEMENT

ಸೇತುವೆಗೆ ವೀರ ಸಾವರ್ಕರ್‌ ಹೆಸರು ಇಡುವುದರಲ್ಲಿ ತಪ್ಪೇನಿದೆ: ಅಶೋಕ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 15:14 IST
Last Updated 27 ಮೇ 2020, 15:14 IST
ಆರ್‌.ಅಶೋಕ್‌
ಆರ್‌.ಅಶೋಕ್‌   

ಚಿತ್ರದುರ್ಗ: ಬೆಂಗಳೂರಿನ ಯಲಹಂಕ ಸೇತುವೆಗೆ ವೀರ ಸಾವರ್ಕರ್‌ ಹೆಸರು ಇಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆದರಿಕೆಗಳಿಗೆ ಬಿಜೆಪಿ ಬಗ್ಗುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿರುಗೇಟು ನೀಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

‘ಸಾವರ್ಕರ್‌ ಹೆಸರಲ್ಲೇ ವೀರ ಎಂಬ ವಿಶೇಷಣವಿದೆ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತರಲು ಶ್ರಮಿಸಿದ್ದಾರೆ. ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್‌ ಅವರ ಹೆಸರನ್ನು ಹಲವು ಕಡೆ ಇಡಲಾಗಿದೆ. ಸಾವರ್ಕರ್‌ ಹೆಸರು ಇಡುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಹಿಂದುತ್ವ ಪ್ರತಿಪಾದನೆ ಮಾಡಿದ ಕಾರಣಕ್ಕೆ ಸಾವರ್ಕರ್‌ ಅವರನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ. ನಕಲಿ ಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಮನಸ್ಥಿತಿಯಿಂದ ಕಾಂಗ್ರೆಸ್‌ ನಾಯಕರು ಹೊರಬರುವ ಅಗತ್ಯವಿದೆ. ಸ್ವಾತಂತ್ರ್ಯ ಚಳವಳಿಗೆ ಹೋರಾಡಿದವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕಿದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.