ADVERTISEMENT

ರಾಜಕೀಯಕ್ಕೆ ಮಠ ಎಳೆಯಬೇಡಿ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 16:04 IST
Last Updated 12 ಏಪ್ರಿಲ್ 2024, 16:04 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಮಂಡ್ಯದಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ ಪಕ್ಷ ಆದಿಚುಂಚನಗಿರಿ ಮಠವನ್ನು ಚುನಾವಣಾ ರಾಜಕೀಯಕ್ಕೆ ಎಳೆದು ತಂದು ಗೊಂದಲ ಸೃಷ್ಟಿಸುವ ಹತಾಶ ಪ್ರಯತ್ನ ನಡೆಸಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದ್ದಾರೆ.

ಈ ಕುರಿತು ‘ಎಕ್ಸ್‌’ ಮಾಡಿರುವ ಅವರು, ‘ಸೋಲಿನ ಸುಳಿವು ಸಿಗುತ್ತಿದ್ದಂತೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಚಿವ ಚಲುವರಾಯಸ್ವಾಮಿ ಅವರು ಆದಿಚುಂಚನಗಿರಿ ಮಠ ಮತ್ತು ಸ್ವಾಮೀಜಿಯವರನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

‘ಚಲುವರಾಯಸ್ವಾಮಿ ಅವರೇ, ಮಠಗಳು ಅಂದರೆ ಅದು ಸಮಾಜಕ್ಕೆ ಸನ್ಮಾರ್ಗ ತೋರುವ ಅಧ್ಯಾತ್ಮದ ಕೇಂದ್ರಗಳು.  ಬಡ ಬಗ್ಗರಿಗೆ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ದಾಸೋಹ ನೀಡುವ ಸೇವಾ ಕೇಂದ್ರಗಳು. ಮಸೀದಿಗಳು, ಮದರಸಾಗಳು, ಮೌಲ್ವಿಗಳನ್ನು ಬಳಸಿಕೊಂಡು ವೋಟ್‌ ಬ್ಯಾಂಕ್‌ ಗ್ಯಾರಂಟಿ ಮಾಡಿಕೊಳ್ಳುವ ರಾಜಕಾರಣಕ್ಕೆ ಒಗ್ಗಿಕೊಂಡಿರುವ ನಿಮ್ಮ ಕಾಂಗ್ರೆಸ್‌ ಪಕ್ಷದ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣುವುದು ಸಹಜ’ ಎಂದು ಕುಟುಕಿದ್ದಾರೆ.

ADVERTISEMENT

‘ಮಠಗಳು ರಾಜಕೀಯ ನಾಯಕರನ್ನು ಸೃಷ್ಟಿಸುವ ಕೇಂದ್ರಗಳಲ್ಲ. ರಾಜಕೀಯ ನಾಯಕರನ್ನು ಬೆಳೆಸುವುದು ಅಂದರೆ ಅದು ಕಮಿಷನ್‌ ಕೊಟ್ಟು ಕಾಂಟ್ರಾಕ್ಟ್‌ ಪಡೆದುಕೊಂಡಷ್ಟು ಸುಲಭವೂ ಅಲ್ಲ. 2,000 ವರ್ಷಗಳ ಭವ್ಯ ಪರಂಪರೆ, ಇತಿಹಾಸ ಇರುವ ಆದಿಚುಂಚನಗಿರಿ ಮಠಕ್ಕೆ ತನ್ನದೇ ಆದ ಘನತೆ ಇದೆ. ನಿಮ್ಮ ಕೀಳು ರಾಜಕೀಯಕ್ಕೆ ಆದಿಚುಂಚನಗಿರಿ ಮಠವನ್ನು ಎಳೆದು ತಂದು ಶ್ರೀಗಳಿಗೆ ಮುಜುಗರ ಉಂಟು ಮಾಡುವ ಪಾಪದ ಕೆಲಸ ಮಾಡಬೇಡಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.