ADVERTISEMENT

ಸಿಎಂ ಕುತ್ತಿಗೆಗೆ ಸಾವಿರ ಹಗರಣಗಳ ಸರಮಾಲೆ: ಆರ್‌.ಅಶೋಕ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 12:54 IST
Last Updated 13 ಫೆಬ್ರುವರಿ 2026, 12:54 IST
ಆರ್‌.ಅಶೋಕ್‌
ಆರ್‌.ಅಶೋಕ್‌   

ಚಿತ್ರದುರ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಸಾವಿರ ಹಗರಣಗಳ ಸರಮಾಲೆ ಸುತ್ತಿಕೊಂಡಿದೆ. ರಾಜ್ಯದ ಪಾಲಿಗೆ ಈ ಸಾವಿರ ದಿನಗಳು ಕರಾಳ ದಿನಗಳಾಗಿವೆ. ಈಗ ಯಾವ ಪುರುಷಾರ್ಥಕ್ಕೆ ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದರು.

ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಡಾ ಹಗರಣದ ಮೂಲಕ ಸಿದ್ದರಾಮಯ್ಯ ಅವರು ಹಗರಣಗಳ ಮೂಲ ಪುರುಷ ಎನಿಸಿದ್ದಾರೆ. ಸಾವಿರ ದಿನಗಳು ಬರೀ ಲೂಟಿಯಿಂದ ಕೂಡಿದ್ದವು. ರಾಹುಲ್‌ ಗಾಂಧಿ ಅವರಿಗೆ ಲೂಟಿ ಹಣ ರವಾನೆಯಾಗುತ್ತಿದೆ. ಅಲಿಬಾಬಾ ಮತ್ತು 30 ಮಂದಿ ಕಳ್ಳರಿಂದ ಸಾಧನಾ ಸಮಾವೇಶ ನಡೆಯುತ್ತಿದೆ. ಭಿಕ್ಷಾ ಪಾತ್ರೆ ಹಿಡಿದಿರುವ ರಾಜ್ಯ ಸರ್ಕಾರ ಜನರಿಗೆ ಟೋಪಿ ಹಾಕುತ್ತಿದೆ’ ಎಂದು ಆರೋಪಿಸಿದರು.

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ, ರಾಜಕೀಯ ಮಾಡಲು ಬಂದಿದ್ದೇನೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಈಗ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಎಂಬುದೇ ಗೊತ್ತಿಲ್ಲ. ಅಬಕಾರಿ ಇಲಾಖೆಯಲ್ಲಿ ₹ 6 ಸಾವಿರ ಕೋಟಿ ಹಗರಣ ನಡೆದಿದೆ. ಆ ಹಣ ರಾಹುಲ್‌ಗಾಂಧಿಗೆ ಹೋಗಿದೆಯಾ, ಸಿದ್ದರಾಮಯ್ಯಗೆ ಹೋಗಿದೆಯಾ, ಅದೇ ಹಣದಲ್ಲಿ ಸಮಾವೇಶ ಮಾಡುತ್ತಿದ್ದಾ’ ಎಂದು ಪ್ರಶ್ನಿಸಿದರು.

ADVERTISEMENT

‘ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿದಿದ್ದು ಶೇ 80 ಕಮೀಷನ್‌ ಆರೋಪ ಮಾಡಿದ್ಧಾರೆ. ಅಧಿಕಾರಿಗಳ ಮೇಲೆ ಸರ್ಕಾರದ ಕಿರುಕುಳ ತೀವ್ರಗೊಂಡಿದ್ದು ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ಮರಳು ದಂಧೆಯನ್ನೇ ಸರ್ಕಾರ ಎಟಿಎಂ ಮಾಡಿಕೊಂಡಿದೆ. ಜಿಎಸ್‌ಟಿ ಹಣ ಬಿಡುಗಡೆ ಸಂಬಂಧ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲಿ. ರೈಲ್ವೆ, ಜಲಜೀವನ ಮಿಷನ್‌, ಕೃಷಿ ಇಲಾಖೆಗೆ ಬಂದ ಹಣ ಎಷ್ಟು ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ಮುಖ್ಯಮಂತ್ರಿಗಳು 16 ಬಜೆಟ್‌ ಮಂಡಿಸಿದ್ದಾರೆಂದರೆ ರಾಜ್ಯ ಸಮೃದ್ಧವಾಗಿರಬೇಕಿತ್ತು, ವಿಜಯನಗರ ಸಾಮ್ರಾಜ್ಯದಂತಿರಬೇಕಿತ್ತು. ಬಜೆಟ್‌ ಹಣ ಎಲ್ಲಿಗೆ ಹೋಯಿತು, ಯಾವ ಬಿಲ ಸೇರಿತು? ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ’ ಎಂದರು.

ರಾಜಕೀಯ ಗನ್‌ ಹಿಡಿದ ಡಿಕೆಶಿ

‘ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹೋದ ಡಿ.ಕೆ.ಸುರೇಶ್‌ ರಾಜಕೀಯ ಗನ್‌ ಹಿಡಿದು ಬೀದಿಗಿಳಿದಿದ್ದಾರೆ. ಯಾವಾಗ ಯಾರನ್ನು ರಾಜಕೀಯವಾಗಿ ಶೂಟ್‌ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ‘ ಎಂದು ಆರ್‌.ಅಶೋಕ್‌ ಹೇಳಿದರು.

‘ಒತ್ತಡಕ್ಕೆ ಮಣಿದು ಆರ್‌ಸಿಬಿಗೆ ಮ್ಯಾಚ್‌ ಆಡಲು ಅನುಮತಿ ನೀಡುತ್ತಿದ್ದಾರೆ. ಏನಾದರೂ ಹೆಚ್ಚು–ಕಡಿಮೆಯಾದರೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಆರ್‌ಸಿಬಿ ದುಡ್ಡಿನ ಲಾಬಿಗೆ ಸರ್ಕಾರ ಮಣಿದಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.