
ಬೆಂಗಳೂರು: ‘ಗುಪ್ತಚರ ವಿಭಾಗವನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತಿದೆಯೇ ಅಥವಾ ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯವನ್ನು ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆಯೆ? ಕರ್ನಾಟಕದ ಜನತೆಗೆ ನೇರ ಮತ್ತು ಪ್ರಾಮಾಣಿಕ ಉತ್ತರ ಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಟೀಕೆಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅಶೋಕ, ‘ಗುಪ್ತಚರ ಇಲಾಖೆ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಮಾಧ್ಯಮ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ನಿಮ್ಮನ್ನು ಪ್ರಶ್ನಿಸಿದ್ದೇವೆ. ವರದಿಯಿಂದ ಗಲಿಬಿಲಿಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ’ ಎಂದಿದ್ದಾರೆ.
‘ಇಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಾಗ, ವಿರೋಧ ಪಕ್ಷದ ನಾಯಕನಾಗಿ ಅದರ ಬಗ್ಗೆ ಸ್ಪಷ್ಟನೆ ಕೇಳುವುದು ನನ್ನ ಸಾಂವಿಧಾನಿಕ ಜವಾಬ್ದಾರಿ. ಜನರ ಮುಂದೆ ಸತ್ಯಾಂಶಗಳನ್ನು ಇಡುವ ಬದಲು, ತಾವು ಯಾವುದೋ ಹಳೆಯ ಇತಿಹಾಸವನ್ನು ಕೆದಕಿ, ಸಂಬಂಧವಿಲ್ಲದ ರಾಷ್ಟ್ರೀಯ ನಾಯಕರನ್ನು ಎಳೆದು ತರುವ ಮೂಲಕ ವಿಷಯಾಂತರ ಮಾಡಲು ಯತ್ನಿಸುತ್ತಿರುವುದು ಸ್ಪಷ್ಟವಾಗಿ ತೋರುತ್ತದೆ’ ಎಂದು ಅಶೋಕ ಹೇಳಿದ್ದಾರೆ.
ಕದ್ದಾಲಿಕೆ ಮಾಡಿದ್ದರೆ ಅಧಿಕಾರ ಉಳಿಯುತ್ತಿತ್ತು: ಎಚ್‌ಡಿಕೆ ‘ನಾನು ಎರಡು ಬಾರಿ ಅಲ್ಪ ಅವಧಿಗೆ ಮುಖ್ಯಮಂತ್ರಿ ಆಗಿದ್ದೆ. ಸ್ವತಂತ್ರ ಸರ್ಕಾರವೂ ನನ್ನದಲ್ಲ. ಪೋನ್ ಕದ್ದಾಲಿಕೆ ಮಾಡಿದ್ದಿದ್ದರೆ ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. 2019ರಲ್ಲಿ ಸರ್ಕಾರ ಕೆಡವಲು ಯಾರು ಕರಾಮತ್ತು ನಡೆಸಿದರು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ‘ಎಕ್ಸ್’ ಮಾಡಿರುವ ಅವರು ‘ಈಗಿನ ಗುಪ್ತಚರ ರಾಜಕಾರಣ ನನಗೆ ಗೊತ್ತು. ಸಿದ್ದರಾಮಯ್ಯ ತನಿಖಾ ತಂಡ (ಎಸ್‌ಐಟಿ) ಏನೇನು ಮಾಡುತ್ತಿದೆ ಎನ್ನುವುದು ಗೊತ್ತಿದೆ. ಅಧಿಕಾರ ದುರ್ಬಳಕೆ ಪ್ರತಿಪಕ್ಷಗಳ ವಿರುದ್ಧ ಸೇಡು ಸಾಧನೆ ನಿಮ್ಮ ನೈಜಗುಣ. ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕುವಷ್ಟು ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ನಡುವೆ ಕುಚುಕುತನವಿದೆ. ನಿಮ್ಮ ಸ್ನೇಹಿತನಿಗಾಗಿ (ಶಿವಕುಮಾರ್) ನೀವು ಕೊಟ್ಟ ವಚನ ಉಳಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ‘ಫೋನ್ ಕದ್ದಾಲಿಕೆ ವಿಚಾರವನ್ನು ಮಾಧ್ಯಮಗಳೇ ಬಿತ್ತರಿಸುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ. ವಿರೋಧ ಪಕ್ಷದ ಕೆಲಸ ಮಾಡಿದ್ದೇನೆ ಅಷ್ಟೆ. ಜನರು ದಯೆತೋರಿ ಕಾಂಗ್ರೆಸ್‌ಗೆ 140 ಸ್ಥಾನ ಕೊಟ್ಟರೂ ಸುಗಮ ಆಡಳಿತ ನಡೆಸುವುದು ಬಿಟ್ಟು ಕುರ್ಚಿಗಾಗಿ ಹಾದಿಬೀದಿಯಲ್ಲಿ ಕಚ್ಚಾಟ ನಡೆಸುತ್ತಿದ್ದಾರೆ. ಈ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ. ವಿರೋಧ ಪಕ್ಷಗಳು ಪ್ರಶ್ನಿಸಿದಾಗ ಮುಖ್ಯಮಂತ್ರಿ ಉತ್ತರ ಕೊಡುವುದು ಬಿಟ್ಟು ವಿಷಯಾಂತರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.