ADVERTISEMENT

ರಾಜ್ಯದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿ ಬದಲಾಗಿವೆ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 14:14 IST
Last Updated 25 ಜನವರಿ 2026, 14:14 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯಾ ಅಥವಾ ಪೊಲೀಸ್‌ ರಾಜ್ಯದ ಆಡಳಿತ ಇದೆಯಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಪ್ರಶ್ನಿಸಿದ್ದಾರೆ.

‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇನ್ನೂ ಜಾರಿಯೇ ಆಗದ ಒಂದು ಮಸೂದೆಯನ್ನು ಉಲ್ಲೇಖಿಸಿ ಪೊಲಿಸರು ವಿರೋಧ ಪಕ್ಷಗಳ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ. ರಾಜ್ಯದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿ ಬದಲಾಗಿವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ’ ಎಂದು ಆರೋಪಿಸಿದ್ದಾರೆ.

‘ರಾಜ್ಯಪಾಲರ ಅಂಕಿತ ಬೀಳದೆ, ರಾಜ್ಯಪತ್ರದಲ್ಲಿ ಪ್ರಕಟವಾಗದೆ ಯಾವೊಂದು ಮಸೂದೆಯೂ ಕಾಯ್ದೆಯಾಗುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ಸ್ವಯಂಘೋಷಿತ ಸಂವಿಧಾನ ತಜ್ಞರು ಮತ್ತು ವಕೀಲರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ. 

ADVERTISEMENT

‘ಕೇಸರಿ, ಕುಂಕುಮ ಎಂದರೆ ರಾಜ್ಯ ಕಾಂಗ್ರೆಸ್‌ ದ್ವೇಷ ಕಾರುತ್ತದೆ. ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್‌ಗಿರುವ ಪೂರ್ವಗ್ರಹದ ಕಾರಣಕ್ಕೆ ಗಣೇಶ ವಿಸರ್ಜನೆ ಮೆರವಣಿಗೆ, ಶೋಭಾಯಾತ್ರೆ, ಹಿಂದೂ ಸಮಾಜೋತ್ಸವ ಮಾಡುವುದು ತಪ್ಪು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೂ ವಿರೋಧಿ ಸರ್ಕಾರವನ್ನು ಕನ್ನಡಿಗರು ಕಿತ್ತೊಗೆಯುವ ದಿನ ಬಹಳ ದೂರವಿಲ್ಲ’ ಎಂದಿದ್ದಾರೆ.

‘ನೋಟಿಸ್‌ ನೀಡಿದ್ದು ತಪ್ಪು’
ಬೆಂಗಳೂರು: ‘ದ್ವೇಷ ಭಾಷಣ ಮಸೂದೆಯ ಅಡಿ ಬಿಜೆಪಿ ಮುಖಂಡ ವಿಕಾಸ್‌ ಪುತ್ತೂರು ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದು ತಪ್ಪು’ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು. ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು ‘ಈ ವಿಚಾರವಾಗಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ’ ಎಂದರು. ‘ಈ ಮಸೂದೆಗೆ ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ನೋಟಿಸ್‌ ನೀಡಲು ಅವಕಾಶವಿದೆ. ಇನ್ನೂ ಕಾಯ್ದೆಯಾಗಿ ಜಾರಿಯಾಗದ ಕಾರಣ ಈ ಮಸೂದೆಯ ಅಡಿ ನೋಟಿಸ್‌ ನೀಡಿರುವುದು ತಪ್ಪು. ಪೊಲೀಸರು ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.