ಬೆಂಗಳೂರು: ಕಾಂಗ್ರೆಸ್ ಶಾಸಕರೇ ಅವರ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ಶಾಸಕರ ಅತೃಪ್ತಿ ದಿನೇ ದಿನೇ ಹೆಚ್ಚುತ್ತಿದ್ದು, ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರವೇ ಇದಕ್ಕೆ ತಾಜಾ ಉದಾಹರಣೆ ಎಂದರು.
ಶಾಸಕರು ದಂಗೆ ಎದ್ದಿದ್ದಾರೆ ಎಂದರೆ ಆ ರೀತಿ ಏನೂ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಬಿ.ಆರ್.ಪಾಟೀಲ ಅವರು ಸರ್ಕಾರದ ವಿರುದ್ಧ ಕೆಂಡ ಕಾರಿ ಎರಡನೇ ಬಾರಿ ಪತ್ರ ಬರೆದಿದ್ದಾರೆ. ಅಧಿವೇಶನಕ್ಕೆ ಬರುವುದಿಲ್ಲ, ರಾಜೀನಾಮೆ ಕೊಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಬಿ.ಆರ್.ಪಾಟೀಲ ಒಬ್ಬರೇ ಅಲ್ಲ. ಹಲವು ಶಾಸಕರು ಅತೃಪ್ತಿ ಹೊರ ಹಾಕುತ್ತಲೇ ಬಂದಿದ್ದಾರೆ. ಕೆಲವು ಸಚಿವರ ನಡವಳಿಕೆ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆಯುತ್ತಲೇ ಬಂದಿದ್ದಾರೆ. ಇದು ಜನರಿಗೆ ನೆಮ್ಮದಿ ಕೊಡುವ ಸರ್ಕಾರವಲ್ಲ. ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ರೀತಿಯಲ್ಲಿ ಬೇರೆ ರಾಜ್ಯಗಳ ಚುನಾವಣೆಗೆ ಬೊಕ್ಕಸದ ಹಣವನ್ನು ಖರ್ಚು ಮಾಡುತ್ತಿದೆ ಎಂದು ಅಶೋಕ ಟೀಕಿಸಿದರು.
‘ಬಿ.ಆರ್.ಪಾಟೀಲ ರೀತಿಯಲ್ಲಿ ಇತರ ಶಾಸಕರೂ ಸತ್ಯ ಹೇಳುವ ಬಗ್ಗೆ ಧೈರ್ಯ ಮಾಡಬೇಕು. ಕಾಂಗ್ರೆಸ್ ಒಡೆದು ಹೋಗಲಿ ಎಂಬುದು ನನ್ನ ಉದ್ದೇಶವಲ್ಲ. ಜನರಿಗಾಗಿ ಒಳ್ಳೆಯ ದಾರಿಯಲ್ಲಿ ನಡೆಯಬೇಕು. ರಾಜೀನಾಮೆ ನೀಡುವುದು ಕೊನೆಯ ಹಂತ. ಬಿ.ಆರ್.ಪಾಟೀಲ ಕೊನೆಯ ಹಂತ ತಲುಪಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ ಅವರೂ ಅಸಮಾಧಾನಗೊಂಡಿದ್ದಾರೆ’ ಎಂದರು.
‘ರಾಜ್ಯದ ರೈತರಿಗೆ ಪರಿಹಾರ ನೀಡಲು ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ. ಪಿಡಿಓ ಖಾತೆಯಲ್ಲಿ ಹಣ ಇದೆ ಎನ್ನುತ್ತಾರೆ. ಆ ಖಾತೆಯಲ್ಲಿ ಹಣ ಇದ್ದರೆ ಏನು ಪ್ರಯೋಜನ? ರೈತರಿಗೆ ಪರಿಹಾರ ನೀಡಬೇಕಲ್ಲವೇ’ ಎಂದು ತಿಳಿಸಿದರು.
‘ಗುತ್ತಿಗೆದಾರ ಅಂಬಿಕಾಪತಿ ನಿಧನದ ವಿಚಾರವನ್ನು ನೋಡಿದಾಗ ಅವರ ಮೇಲೆ ಎಷ್ಟು ಒತ್ತಡ ಇತ್ತು ಎಂಬುದು ಗೊತ್ತಾಗುತ್ತದೆ. ಹೃದಯಾಘಾತದಿಂದ ನಿಧನರಾದರೂ ಅವರ ಮೇಲೆ ಒತ್ತಡ ಇರುವುದಂತೂ ನಿಜ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.