ADVERTISEMENT

ರಫೇಲ್‌ ಹಗರಣ: ಜಂಟಿ ಸಂಸದೀಯ ಸಮಿತಿ ರಚಿಸದಿದ್ದರೆ ಹೋರಾಟ ತೀವ್ರ– ವೇಣುಗೋಪಾಲ್‌

ಇದೇ 6ರಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 20:35 IST
Last Updated 2 ಸೆಪ್ಟೆಂಬರ್ 2018, 20:35 IST
   

ಬೆಂಗಳೂರು: ‘ರಫೇಲ್‌ ಹಗರಣದ ವಿರುದ್ಧ ಕಾಂಗ್ರೆಸ್‌ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಪ್ರಬಲ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಇದೇ 6ರಿಂದ 15ರ ನಡುವೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ದೇಶಕಂಡ ಅತಿದೊಡ್ಡ ಹಗರಣವಿದು. ರಾಜ್ಯದ ಯುವಜನರು ಈ ಹಗರಣದ ಬಲಿಪಶುಗಳು. ಈ ಹಗರಣದ ಹಿಂದಿನ ಭ್ರಷ್ಟಾಚಾರದ ಬಗ್ಗೆ ಕಳೆದ ಸಂಸತ್‌ ಅಧಿವೇಶನದಲ್ಲಿ ಚರ್ಚಿಸಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಈ ಬಗ್ಗೆ ಮೂರು ನಾಲ್ಕು ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿದ್ದರು. ಪ್ರಧಾನಿ ಒಂದು ಪ್ರತಿಕ್ರಿಯೆಯನ್ನೂ ನೀಡಲಿಲ್ಲ’ ಎಂದರು.

‘ಎಲ್ಲ ರಕ್ಷಣಾ ಖರೀದಿ ನಿಯಮ ಉಲ್ಲಂಘಿಸಿದ ಹಾಗೂ ಪ್ರಧಾನಿಯೇ ನೇರವಾಗಿ ಭಾಗಿಯಾದ ಹಗರಣವಿದು. ಜಂಟಿ ಸಂಸದೀಯ ಸಮಿತಿಯಿಂದ ಅದನ್ನು ತನಿಖೆಗೆ ಒಳಪಡಿಸುವಂತೆ ನಾವು ಒತ್ತಾಯಿಸಿದ್ದೇವೆ. ಈ ಸಮಿತಿಯಲ್ಲಿ ಸಹಜವಾಗಿಯೇ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸತ್ಯ ಹೊರಗೆ ಬರಲಿ. ಈ ಸಮಿತಿಯಿಂದ ತನಿಖೆಗೆ ಒಳಡಿಸಲು ಅವರು ಏಕೆ ಭಯಪಡಬೇಕು. ಸಮಿತಿ ರಚಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರೆ ರಫೇಲ್‌ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂಬುದೇ ಅರ್ಥ’ ಎಂದು ಹೇಳಿದರು.

ADVERTISEMENT

‘ಈ ಹಗರಣವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒಳಪಡಿಸದಿದ್ದರೆ ಕೇಂದ್ರ ಸರ್ಕಾರವಿರುದ್ಧ ಹೋರಾಟ ನಡೆಸುತ್ತೇವೆ. ಜನರ ಬಳಿಗೆ ಹೋಗಿ ಇದರ ಹಿಂದಿನ ಈ ಭ್ರಷ್ಟಾಚಾರದ ಬಗ್ಗೆ ವಿವರಿಸುತ್ತೇವೆ. ರಾಜ್ಯದಲ್ಲೂ ಉಗ್ರ ಹೋರಾಟ ನಡೆಸುತ್ತೇವೆ. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ರ‍್ಯಾಲಿ ನಡೆಸಲಿದ್ದೇವೆ. ಅದರಲ್ಲಿ ಪಕ್ಷದ ಎಲ್ಲ ಹಿರಿಯ ಮುಖಂಡರು ಭಾಗಹಿಸಲಿದ್ದಾರೆ’ ಎಂದು ತಿಳಿಸಿದರು.

‘ಯುಪಿಎ ಆಡಳಿತಾವಧಿಯಲ್ಲಿ ಫ್ರಾನ್ಸ್‌ ಜೊತೆ ಮಾಡಿಕೊಂಡ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಪ್ರಮುಖವಾಗಿ ಮೂರು ಷರತ್ತುಗಳಿದ್ದವು. ಅದರ ಪ್ರಕಾರ ಭಾರತ 126 ವಿಮಾನಗಳನ್ನು ಖರೀದಿಸಬೇಕಿತ್ತು. ತಂತ್ರಜ್ಞಾನ ವರ್ಗಾವಣೆಗೂ ಅವಕಾಶ ಕಲ್ಪಿಸಲಾಗಿತ್ತು.16 ವಿಮಾನಗಳನ್ನು ಮಾತ್ರ ಫ್ರಾನ್ಸ್‌ನಲ್ಲಿ ತಯಾರಿಸಿ, ಉಳಿದವುಗಳನ್ನು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ತಯಾರಿಸಬೇಕಿತ್ತು. ಈಗ ಎಚ್‌ಎಎಲ್‌ ಸಂಸ್ಥೆಯ ಬದಲು ಅಂಬಾನಿ ಕಂಪನಿಗೆ ಅವಕಾಶ ಮಾಡಿಕೊಡಲಾಗಿದೆ. ಶೇ 50 ಹಣವನ್ನು ಭಾರತದಲ್ಲೇ ಖರ್ಚು ಮಾಡಬೇಕಿತ್ತು. ಯುಪಿಎ ಒಪ್ಪಂದ ಪ್ರಕಾರ ಮುಂದುವರಿದಿದ್ದರೆ ಬೆಂಗಳೂರಿನ ಸಾವಿರಾರು ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತಿತ್ತು’ ಎಂದು ವಿವರಿಸಿದರು.

‘ಈಗಿನ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಫ್ರಾನ್ಸ್‌ನಿಂದ 36 ವಿಮಾನ ಖರೀದಿಸಲಾಗುತ್ತಿದೆ. ಅವೆಲ್ಲವೂ ಫ್ರಾನ್ಸ್‌ನಲ್ಲೇ ತಯಾರಾಗಲಿವೆ. ತಂತ್ರಜ್ಞಾನ ವರ್ಗಾವಣೆಯೂ ಇಲ್ಲ. ಷರತ್ತುಗಳನ್ನು ಸಡಿಲಿಸಿದ ಬಳಿಕ ವಿಮಾನದ ಬೆಲೆ ಕಡಿಮೆ ಆಗಬೇಕಿತ್ತು. ಆದರೆ, ನಾವೇನು ನೋಡುತ್ತಿದ್ದೇವೆ. ಯುಪಿಎ ಒಪ್ಪಂದ ಪ್ರಕಾರ ಪ್ರತಿ ವಿಮಾನದ ಬೆಲೆ ₹ 526 ಕೋಟಿ ಇದ್ದುದು ಈಗ ₹ 1,670 ಕೋಟಿಗೆ ಹೆಚ್ಚಾಗಿದೆ. ಅದೂ ಮೂರು ಪಟ್ಟು ಹೆಚ್ಚಳ’ ಎಂದು ವಿವರಿಸಿದರು.

‘ಸಂಸತ್ತಿನಲ್ಲಿ ಈ ಬಗ್ಗೆ ಪ್ರಧಾನಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಪ್ರಶ್ನಿಸಿದ್ದೆವು. ದೇಶದ ಜನರು ವಿಮಾನದ ಬೆಲೆ ತಿಳಿಯಲು ಬಯಸುತ್ತಿದ್ದಾರೆ ಎಂದಿದ್ದೆವು. ಆಗ ರಕ್ಷಣಾ ಸಚಿವೆ, ಒಪ್ಪಂದದ ಪ್ರಕಾರ ಬೆಲೆಯನ್ನು ಬಹಿರಂಗಪಡಿಸುವಂತಿಲ್ಲ ಎಂದು ಉತ್ತರ ನೀಡಿದ್ದರು. ಅಂಥಹ ದಾಖಲೆ ಇದ್ದರೆ, ಅದನ್ನಾದರೂ ಸಂಸತ್ತಿನಲ್ಲಿ ಹಾಜರುಪಡಿಸಿ ಎಂದು ನಾನೇ ಸವಾಲು ಹಾಕಿದ್ದೆ. ಅವರು ದಾಖಲೆ ನೀಡಲಿಲ್ಲ. ಇನ್ನೊಂದು ವಿಷಯವೆಂದರೆ ರಕ್ಷಣಾ ಇಲಾಖೆಯ ರಾಜ್ಯ ಸಚಿವರು ಅದಾಗಲೇ ಸಂಸತ್ತಿನಲ್ಲಿ ವಿಮಾನದ ಬೆಲೆ ಬಗ್ಗೆ ಹೇಳಿಕೆ ನೀಡಿದ್ದರು. ರಕ್ಷಣಾ ಸಚಿವೆ ಸದನವನ್ನು ತಪ್ಪುದಾರಿಗೆ ಎಳೆದುದಕ್ಕೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದೇವೆ’ ಎಂದು ತಿಳಿಸಿದರು.

‘ನೋಟು ರದ್ದತಿ ಆದಾಗ ನಾವೆಲ್ಲ ₹500 ಹಾಗೂ ₹ 1000ದ ನೋಟು ಬದಲಿಸಲು ಸರದಿಯಲ್ಲಿ ನಿಂತಿದ್ದೆವು. 100 ದಿನ ಕೊಟ್ಟರೆ ಎಷ್ಟು ಕಪ್ಪುಹಣ ಇದೆ ಎಂಬುದನ್ನು ತೋರಿಸುತ್ತೇನೆ ಎಂದು ಪ್ರಧಾನಿ ಗುಡುಗಿದ್ದರು. ಆದರೆ, ಈಗ ರದ್ದಾದ ನೋಟುಗಳಲ್ಲಿ ಶೇ 99.3ರಷ್ಟು ಬ್ಯಾಂಕ್‌ಗಳಿಗೆ ವಾಪಾಸ್‌ ಬಂದಿದೆ. ಭಾರತದಲ್ಲಿ ರದ್ದಾದ ನೋಟುಗಳು ನೇಪಾಳದಲ್ಲಿ ಈಗಲೂ ಚಲಾವಣೆಯಲ್ಲಿವೆ. ಅವುಗಳೂ ಹಿಂದಕ್ಕೆ ಬಂದರೆ, ಶೇ 100ರಷ್ಟು ಹಣ ಹಿಂದಕ್ಕೆ ಬಂದ ಹಾಗಾಗುತ್ತದೆ. ಹಾಗಾದರೆ ಕಪ್ಪು ಹಣ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದರು.

‘ನೋಟು ರದ್ದತಿ ಬಳಿಕ ತಮಿಳುನಾಡಿನಲ್ಲಿ 50 ಸಾವಿರ ಸಣ್ಣ ಕೈಗಾರಿಕೆಗಳು ಮುಚ್ಚಿದವು. ಬೆಂಗಳೂರಿನಲ್ಲಿ ಎಷ್ಟು ಕೈಗಾರಿಕೆಗಳು ಮುಚ್ಚಿವೆ ಎಂಬ ಅಂಕಿ ಅಂಶ ಲಭ್ಯವಿಲ್ಲ. ಭಾರಿ ಸಂಖ್ಯೆಯಲ್ಲಿ ಜನ ಉದ್ಯೋಗ ಕಳೆದುಕೊಂಡರು. ಇದು ಕೂಡಾ ದೇಶ ಕಂಡ ಅತಿದೊಡ್ಡ ಹಗರಣಗಳಲ್ಲಿ ಒಂದು’ ಎಂದರು.

‘ನೋಟು ರದ್ದತಿಯಿಂದ 100ಕ್ಕೂ ಹೆಚ್ಚು ಮಂದಿ ಸತ್ತರು. ಇದೆಲ್ಲ ಕಪ್ಪುಹಣ ನಿರ್ಮೂಲನೆಗಾಗಿ ಎಂದು ಆಗ ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿತ್ತು. ನೋಟು ರದ್ದತಿಯಿಂದ ನಕಲಿ ನೋಟು ಚಲಾವಣೆ ನಿಲ್ಲಲಿದೆ. ಗಡಿಯಲ್ಲಿ ಭಯೋತ್ಪಾದನೆ ಸ್ಥಗಿತಗೊಳ್ಳಲಿದೆ ಎಂದೆಲ್ಲ ಹೇಳಿಕೊಂಡಿತ್ತು. ಈಗ‌ ಪ್ರಧಾನಿ ಈ ಬಗ್ಗೆ ಒಂದು ಮಾತನ್ನೂ ಆಡುತ್ತಿಲ್ಲ. ಸಂಸತ್ತಿನಲ್ಲೂ ಸೊಲ್ಲೆತ್ತುತ್ತಿಲ್ಲ. ಈಗ ಅವರು ಬೇರೆಯೇ ವಿಚಾರಗಳನ್ನು ಹೇಳುತ್ತಿದ್ದಾರೆ. ಈ ಹಿಂದೆ ಹೇಳಿದ ವಿಚಾರಗಳೆಲ್ಲ ಏನಾದವು ಎಂಬುದಕ್ಕೆ ಪ್ರಧಾನಿ ಇನ್ನಾದರೂ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಇವತ್ತು ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹84ಕ್ಕೆ ಹಾಗೂ ಡೀಸೆಲ್‌ ₹ 72ಕ್ಕೆ ಮಾರಾಟವಾಗುತ್ತಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ಪಾತಾಳಕ್ಕಿಳಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ಬದುಕುವುದು ಹೇಗೆ’ ಎಮದು ಪ್ರಶ್ನಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಳದಿಂದ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ಪೆಟ್ರೋಲ್‌ ಬೆಲೆ ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾರ ಈಗ ಹೇಳುತ್ತಿದೆ. ಇನ್ನೊಂದೆಡೆ ದೇಶದ ಆರ್ಥಿಕತೆ ತುಂಭಾ ಚೆನ್ನಾಗಿದೆ ಎಂದೂ ಅವರು ಹೇಳಿಕೊಳ್ಳುತ್ತಿದ್ದಾರೆ.

ದುಬಾರಿ ಬೆಲೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರುವ ಮೂಲಕ ದೇಶದ ಜನರನ್ನು ಲೂಟಿ ಮಾಡಲಾಗುತ್ತಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಅವುಗಳನ್ನು ಅಗ್ಗದ ಬೆಲೆಗೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ. ಇದು ಉತ್ತಮ ಆಡಳಿತವೇ. ಎಷ್ಟು ಬಾರಿ ಎಕ್ಸೈಸ್‌ ಸುಂಕವನ್ನು ಹೆಚ್ಚಿಸಿದ್ದೀರಿ ಎಂದು ಕೇಳಿದರೆ, ಅವರ ಬಳಿ ಉತ್ತರವಿಲ್ಲ. ಕೇಂದ್ರದ ನೀತಿಗಳು ಹಾಗೂ ಕಾರ್ಯಕ್ರಮಗಳು ಸಂಪೂರ್ಣ ಶ್ರೀಮಂತರ ಪರ’ ಎಂದರು.

ಮುಂದಿನ ಲೋಕಸಭಾ ಚುನಾವಣೆ ಬಡವರು ಮತ್ತು ಶ್ರೀಮಂತರ ನಡುವಿನ ಸಮರ. ನರೇಂದ್ರ ಮೋದಿ ಶ್ರೀಮಂತರ ಪರವಾಗಿ ಮತ್ತು ಕಾಂಗ್ರೆಸ್‌ ಬಡವರ ಪರವಾಗಿ ಹೋರಾಟ ನಡೆಸಲಿದೆ ಎಂದರು.

‘ಯುಪಿಎ ಆಡಳಿತಾವಧಿಯಲ್ಲಿ 2ಜಿ. 3ಜಿ ತರಂಗಾಂತರ ಹಂಚಿಕೆ, ಬೋಪೋರ್ಸ್‌ ವಿಚಾರ ಮುಂದಿಟ್ಟುಕೊಂಡು ಮಾಧ್ಯಮಗಳು ಟೀಕೆ ಮಾಡಿದ್ದವು. ಇದು ಮಾಧ್ಯಮಗಳ ಕರ್ತವ್ಯ. ಆದರೆ ಈಗೇನಾಗಿದೆ. ನೋಟು ರದ್ದತಿಯ ಸಮಸ್ಯೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಹಾಗೂ ಉದ್ಯೊಗ ಕತ್ತರಿ ವಿಚಾರಗಳು ಸುದ್ದಿಯಾಗುವುದೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

***

ಜಿಲ್ಲಾ ಮಟ್ಟದಲ್ಲಿ ಸಮಾವೇಶ

‘ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌ ದೇಶದಾದ್ಯಂತ ಹಾಗೂ ಕರ್ನಾಟಕದಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದೆ. ಚುನಾವಣೆ ಸನ್ನದ್ಧತೆ ಕುರಿತು ಸಮಾಲೋಚನೆ ನಡೆಸಲು ಮೂರು ದಿನಗಳಿಂದ ಸರಣಿ ಸಭೆಗಳನ್ನು ನಡೆಸಿದ್ದೇವೆ. ಕ್ಷೇತ್ರವಾರು ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದು, ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸಿದ್ದೇವೆ. ಅಕ್ಟೋಬರ್‌ನಲ್ಲಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದೇವೆ’ ಎಂದು ವೇಣುಗೋಪಾಲ್ ತಿಳಿಸಿದರು.

***

‘ಎಲ್ಲ 28 ಸ್ಥಾನ ಗೆಲ್ಲುತ್ತೇವ’

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟವು ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಿದ್ದೇವೆ’ ಎಮದು ವೇಣುಗೋಪಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಸೀಟು ಹಂಚಿಕೆ ಬಗ್ಗೆ ರಾಷ್ಟ್ರಿಯ ಮಟ್ಟದ ಸಮಿತಿ ತೀರ್ಮಾನ ಕೈಗೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳಕರ ನಡುವಿನ ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ಸಾಗರ ಇದ್ದಂತೆ. ಅಲ್ಲೊಂದು ಇಲ್ಲೊಂದು ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುತ್ತೇವೆ’ ಎಂದರು.

ಮೈತ್ರಿಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗಿದೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಸಮಿತಿ ಸಂಚಾಲಕರು ಅದನ್ನು ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು

***

‘ಚೀನಾ ಪ್ರಧಾನಿ ಜೊತೆ ಮೋದಿ ಕುಣಿದರೂ ಸುದ್ದಿಯಾಗದು‘

ರಾಹುಲ್‌ ಗಾಂಧಿ ಅವರು ಚೀನಾ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳುುದಕ್ಕೆ ಟೀಕೆ ವ್ಯಕ್ತವಾದ ಕುರಿತು ಪ್ರತಿಕ್ರಿತಿಸಿದ ವೇಣುಗೋಪಾಲ್‌, ‘ಮೋದಿ ಅವರು ಚೀನಾ ಪ್ರಧಾನಿ ಜೊತೆ ಕುಣಿದರೂ ಅದು ವಿವಾದವಾಗುವುದಿಲ್ಲ. ಆದರೆ, ರಾಹುಲ್‌ ಚೀನಾ ಮೂಲಕ ಮಾನಸ ಸರೋವರ ಹೋದರೆ ಅದು ಸುದ್ದಿ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

‘ರಾಹುಲ್‌ ಗಾಂಧಿ ದೇವಸ್ಥಾನಕ್ಕೆ ಹೋದಾಗ ಕೆಲವರಿಗೆ ಚಡಪಡಿಕೆ ಉಂಟಾಗುತ್ತದೆ. ಹುಬ್ಬಳ್ಳಿಯಲ್ಲಿ ರಾಹುಲ್‌ ಪ್ರಯಾಣಿಸುತ್ತಿದ್ದ ವಿಮಾನ ಭೂಸ್ಪರ್ಶ ಮಾಡಿದಾಗ ಸಮಸ್ಯೆ ಕಾಣಿಸಿಕೊಂಡಿತ್ತು. ರಾಹುಲ್‌ ಶಿವಭಕ್ತ. ಅಂದು ಅವರು ವಿಮಾನದಿಂದ ಕೆಳಗಿಳಿದ ತಕ್ಷಣವೇ, ಮಾನಸ ಸರೋವರಕ್ಕೆ ಹೋಗುವುದಾಗಿ ಹೇಳಿದ್ದರು. ಮಾನಸ ಸರೋವರ ಮಾತ್ರವಲ್ಲ, ಅನೇಕ ದೇವಸ್ಥಾನಗಳಿಗೆ ಅವರು ಭೇಟಿ ನೀಡಲಿದ್ದಾರೆ’ ಎಂದರು.

‘ದೇವರನ್ನು ನಂಬುವುದು ಬಿಜೆಪಿಯವರಿಗೆ ಸೀಮಿತವಾದ ಹಕ್ಕು ಅಲ್ಲ. ದೇಶದ ಜನರನ್ನು ಒಗ್ಗೂಡಿಸುವುದರಲ್ಲಿ ನಮಗೆ ನಂಬಿಕೆ. ಅವರಿಗೆ ಜನರನ್ನು ಒಡೆಯುವುದರಲ್ಲಿ ನಂಬಿಕೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

***

‘ಚುನಾವಣಾ ಉದ್ದೇಶಕ್ಕೆ ತನಿಖಾ ಸಂಸ್ಥೆಗಳ ದುರ್ಬಳಕೆ’

ಲೋಕಸಭಾ ಚುನಾವಣೆ ಸಮಿಪಿಸುತ್ತಿರುವಂತೆ ರಾಬರ್ಟ್‌ ವಾದ್ರಾ ವಿರುದ್ಧ ಮತ್ತೆ ಎಫ್‌ಐಆರ್‌ ದಾಖಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರ ವಿರುದ್ಧ ಮಾತ್ರ ಅಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕೇಂದ್ರ ಈ ರೀತಿ ನಡೆದುಕೊಂಡಿದೆ. ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಎಷ್ಟು ಬಾರಿ ಆದಾಯ ತೆರಿಗೆ ದಾಳಿ ನಡೆಸಲಾಗಿದೆ ಎಂದು ನೆನಪಿಸಿಕೊಳ್ಳಿ. ಬಿಜೆಪಿವರಿಗೆ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳ ಮೇಲೆ ಮಾತ್ರ ನಂಬಿಕೆ. ರಾಜ್ಯದ ತನಿಖಾ ಏಜೆನ್ಸಿಗಳ ಮೇಲೆ ನಂಬಿಕೆ ಇಲ್ಲ. ಅವರು ಚುನಾವಣೆ ಉದ್ದೇಶಕ್ಕೆ ಈ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇವೆಲ್ಲ ನಡೆಯದು’ ಎಂದು ಸ್ಪಷ್ಟಪಡಿಸಿದರು.

***

‘ಮೂರನೇ ವಾರ ಸಂಪುಟ ವಿಸ್ತರಣೆ’

‘ಸೆಪ್ಟೆಂಬರ್‌ ಮೂರನೇ ವಾರ ನಡೆಯಲಿದೆ. ಹಾಗೆಂದು ನಾನು ಭಾವಿಸಿದ್ದೇನೆ’ ಎಂದು ವೇಣುಗೋಪಾಲ್‌ ತಿಳಿಸಿದರು.

‘ಎಷ್ಟು ಮಂದಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ, ‘ಊಹಾಪೋಹಗಳಿಗೆ ಇನ್ನೊಂದಿಷ್ಟು ಅವಕಾಶವಿರಲಿ’ ಎಂದು ನಗುತ್ತಾ ಉತ್ತರಿಸಿದರು.

***

‘ಸರ್ಕಾರ 5ವರ್ಷ ಪೂರ್ಣಗೊಳಿಸಲಿದೆ’

‘ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಯವರು ಏನೇನು ರಾಜಕೀಯ ಮಾಡಿದರು, ಶಾಸಕರಿಗೆ ಎಷ್ಟು ಆಮಿಷ ಒಡ್ಡಿದರು ಎಂಬುದನ್ನು ಜನ ನೋಡಿದ್ದಾರೆ. ಈಗಲೂ ಶಾಸಕರನ್ನು ಖರೀದಿಸಬಹುದು ಎಂದು ಬಿಜೆಪಿ ಭಾವಿಸಿದಂತಿದೆ. ಸರ್ಕಾರ ಬೀಳಿಸಲು ಅವರು ಈಗಲೂ ಸಂಚು ರೂಪಿಸುತ್ತಿದ್ದಾರೆ. ಏನೇ ಆದರೂ, ಈ ಸರ್ಕಾರ 5ವರ್ಷ ಪೂರ್ಣಗೊಳಿಸಲಿದೆ. ಆ ಬಗ್ಗೆ ಸಂದೇಹ ಬೇಡ’ ಎಂದು ವೇಣುಗೋಪಾಲ್‌ ಸ್ಪಷ್ಟಪಡಿಸಿದರು.

‘ಎರಡು ಪಕ್ಷಗಳು ಸಮಾನ ಅಂಶಗಳ ಆಧಾರದಲ್ಲಿ ಒಗ್ಗಟ್ಟಾಗಿವೆ. ಕಾಂಗ್ರೆಸ್‌, ಜೆಡಿಎಸ್‌ ಅಥವಾ ಬಿಜೆಪಿ ಏಕೈಕ ಪಕ್ಷವಾಗಿ ಆಡಳಿತ ನಡೆಸಿದ್ದರೂ ಭಿನ್ನಾಭಿಪ್ರಾಯ ಇರುತ್ತಿತ್ತು’ ಎಂದರು.

‘ಕುಮಾರಸ್ವಾಮಿ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿ ಆದಾಗ ನಾನೂ ಜತೆಯಲ್ಲೇ ಇದ್ದೆ. 100 ದಿನ ಅಧಿಕಾರ ಪೂರೈಸಿದ್ದಕ್ಕೆ ಧನ್ಯವಾದ ಸಲ್ಲಿಸಲು ಬಂದಿದ್ದೇನೆ ಎಂದಷ್ಟೇ ಮುಖ್ಯಮಂತ್ರಿ ಹೇಳಿದ್ದರು.ಅದು ಬಿಟ್ಟು ಬೇರೇನೂ ಮಾತುಕತೆ ನಡೆದಿಲ್ಲ. ನಾಲ್ಕೈದು ನಿಮಿಷಗಳಲ್ಲೇ ಸಭೆ ಮುಗಿಯಿತು. ಕುಮಾರಸ್ವಾಮಿ ತುಂಭಾ ಖುಷಿಯಲ್ಲಿದ್ದರು. ಆದರೂ ಪತ್ರಿಕೆಗಳು ಅವರು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದರು ಎಂದು ಬರೆದಿವೆ. ಈ ಸುದ್ದಿ ಆಧಾರರಹಿತ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

‘ನಿನ್ನೆ ನಡೆದ ಸಭೆಯಲ್ಲೂ ನಾನು ಸಿಟ್ಟಿನಿಂದ ಹೊರ ನಡೆದೆ ಎಂದು ಕೆಲವು ಪತ್ರಿಕೆಗಳು ಬರೆದಿವೆ. ನಾನು ಸಭೆ ಮುಗಿಸಿದ ಬಳಿಕೂ ಒಂದು ಗಂಟೆ ಕಚೇರಿಯಲ್ಲೇ ಇದ್ದೆ. ನನ್ನ ನೇತೃತ್ವದಲ್ಲಿ ನಡೆಯುವ ಸಭೆಯಿಂದ ನಾನೇ ಹೊರಗೆ ನಡೆಯಲು ಹೇಗೆ ಸಾಧ್ಯ. ಇಂತಹ ಸುದ್ದಿಯೂ ಆಧಾರ ರಹಿತ’ ಎಂದರು.

***

ಬಿಜೆಪಿಯವರು ಈಗಲೂ ಬೋಫೋರ್ಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ರಫೇಲ್‌ ಹಗರಣದ ಎದುರು ಬೋಫೋರ್ಸ್‌ ಏನೇನೂ ಅಲ್ಲ
–ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.