ADVERTISEMENT

ಆಪರೇಷನ್‌ ಕಮಲಕ್ಕೆ ರಫೇಲ್‌ ಹಗರಣದ ಹಣ ಬಳಕೆ: ಪಿ.ವಿ.ಮೋಹನ್ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 10:24 IST
Last Updated 21 ಸೆಪ್ಟೆಂಬರ್ 2018, 10:24 IST
ಪಿ.ವಿ. ಮೋಹನ್
ಪಿ.ವಿ. ಮೋಹನ್   

ಬೆಳಗಾವಿ: ‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ ನಾಯಕರು, ಆಪರೇಷನ್ ಕಮಲಕ್ಕೆ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಗಳಿಸಿದ ಹಣ ಬಳಸುತ್ತಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್‌ ಇಲ್ಲಿ ಶುಕ್ರವಾರ ಗಂಭೀರ ಆರೋಪ ಮಾಡಿದರು.

‘ಬಿಜೆಪಿಯು ಕಿಂಗ್‌ಪಿನ್‌ಗಳ ಮೂಲಕ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಕುದುರೆ ವ್ಯಾಪಾರ ನಡೆಸಲಾಗುತ್ತಿದೆ. ಈ ಎಲ್ಲ ವಿದ್ಯಮಾನಗಳ ಕುರಿತ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಹಾಗೂ ನಮ್ಮ ಕೆಲವು ಶಾಸಕರಿಗೆ ಆಮಿಷ ಒಡ್ಡುತ್ತಿರುವ ಕುರಿತು ಬಿಜೆ‍ಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯತ್ನಿಸುತ್ತಿರುವ ಕುರಿತು ಅವರೊಂದಿಗೆ ಇರುವವರೇ ನಮಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ನಮ್ಮೊಂದಿಗೆ ಇದ್ದಾರೆ ಎಂದು ಯಡಿಯೂರಪ್ಪ ಅವರು ಹೇಳುತ್ತಿರುವುದರ ಮರ್ಮ ನಮಗೆ ಗೊತ್ತಾಗುವುದಿಲ್ಲವೇ?’ ಎಂದು ಕೇಳಿದರು.

ADVERTISEMENT

‘ಸರ್ಕಾರ ಕೆಡವಲು ಬಿಜೆಪಿಯವರು ಯತ್ನ ಮುಂದುವರಿಸಿದರೆ, ಅದಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎನ್ನುವುದು ನಮಗೂ ಗೊತ್ತಿದೆ. ಬಿಜೆಪಿ ಷಡ್ಯಂತ್ರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು. ಅಪವಿತ್ರ ರಾಜಕಾರಣವಾದ ಆಪರೇಷನ್ ಕಮಲ ನಡೆಯಬಾರದು. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ದಂಗೆ ಏಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವುದನ್ನು ಜನರು ತಪ್ಪಾಗಿ ಭಾವಿಸಬಾರದು. ಆಪರೇಷನ್ ಕಮಲದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.