ADVERTISEMENT

ಕೃಷಿಗೆ ಪ್ರತ್ಯೇಕ ಬಜೆಟ್‌, ಬಡ ಮಹಿಳೆ ಖಾತೆಗೆ ಮಾಸಿಕ ₹6 ಸಾವಿರ: ರಾಹುಲ್‌ ಭರವಸೆ

ಮೋದಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 12:18 IST
Last Updated 13 ಏಪ್ರಿಲ್ 2019, 12:18 IST
   

ಚಿತ್ರದುರ್ಗ: ‘ನಾನು ನಿಮ್ಮ ಮುಂದೆ ಸುಳ್ಳು ಹೇಳುವುದಕ್ಕೆ ಬಂದಿಲ್ಲ. ನಾನು ಚೌಕಿದಾರನೆಂದು ಹೇಳುತ್ತಿಲ್ಲ, ಖಾತೆಗೆ ₹15 ಲಕ್ಷ ಹಾಕುತ್ತೇನೆ ಎಂದೂ ಹೇಳುವುದಿಲ್ಲ. ಈಗಾಗಲೇ ನಾವು ಆರ್ಥಶಾಸ್ತ್ರಜ್ಞರಲ್ಲಿ ಚರ್ಚೆ ನಡೆಸಿದ್ದು, ಬಡ ಕುಟುಂಬಗಳಿಗೆ ತಿಂಗಳಿಗೆ ₹6 ಸಾವಿರ ನೇರ ಖಾತೆಗೆ ಜಮೆಯಾಗುವಂತೆ ಮಾಡುತ್ತೇನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜನರಿಗೆ ಭರವಸೆ ನೀಡಿದರು.

ಇಲ್ಲಿನ ಜಯದೇವ ಮುರಾಘರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪರ್ವದ ಬೃಹತ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದರು.

₹15 ಲಕ್ಷ ಬ್ಯಾಂಕ್‌ ಖಾತೆಗೆ ಹಾಕುವುದಾಗಿ ಮೋದಿ ಹೇಳಿದ್ದರು, ಆದರೆ ಸಿಕ್ಕಿದ್ದು ಏನು? ನಾನು ಮೋದಿ ಹೇಳಿದಂತೆ ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಅರ್ಥಶಾಸ್ತ್ರಜ್ಞರಿಂದ ಸಲಹೆ ಪಡೆದು ಬಡ ಕುಟುಂಬಗಳಿಗೆ ತಿಂಗಳಿಗೆ ₹6 ಸಾವಿರ ನೀಡುವ ಭರವಸೆ ನೀಡುತ್ತಿದ್ದೇನೆ. ಅಂದರೆ, ಖಾತೆಗೆ ವರ್ಷಕ್ಕೆ ₹72 ಸಾವಿರ ರೂಪಾಯಿ ಖಂಡಿತವಾಗಿ ಹಾಕುತ್ತೇವೆ. ಆದರೆ, ಎಲ್ಲ ಹಣ ಮಹಿಳೆಯ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಐದು ವರ್ಷಗಳಲ್ಲಿ ₹3.60 ಲಕ್ಷ ಒಂದು ಕುಟುಂಬಕ್ಕೆ ಸಿಗಲಿದೆ.5 ಕೋಟಿ ಕುಟುಂಬದ ಮಹಿಳೆಯರ ಬ್ಯಾಂಕ್‌ ಖಾತೆಗೆ ಈ ಹಣ ನೇರವಾಗಿ ಜಮೆಯಾಗುತ್ತದೆ ಎಂದರು.

ADVERTISEMENT

ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿಯ ಕುರಿತು ಪ್ರಸ್ತಾಪಿಸಿ, ವಿಧಾನಸಭೆ, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಅನುಷ್ಠಾನಗೊಳಿಸುತ್ತೇವೆ. ಉದ್ಯೋಗದಲ್ಲಿಯೂ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುತ್ತೇವೆ ಎಂದರು.

‘ನಾನು ನನ್ನ ಮನದ ಮಾತು ಹೇಳುವುದಕ್ಕೆ ಬಂದಿಲ್ಲ, ನಿಮ್ಮ ಮನದ ಮಾತುಗಳನ್ನು ಕೇಳುವುದಕ್ಕೆ ಬಂದಿದ್ದೇನೆ’ ಎನ್ನುವ ಮೂಲಕ ಜನರಿಂದ ಚಪ್ಪಾಳೆ ಗಿಟ್ಟಿಸಿದರು.

ಮೋದಿ ರೈತರನ್ನು ತಬ್ಬಿರುವುದು ಎಂದಾದರೂ ಕಂಡಿರುವಿರಾ?
ಅನಿಲ್‌ ಅಂಬಾನಿಗೆ ಸರ್ಕಾರದಿಂದ ₹30 ಸಾವಿರ ಕೋಟಿ ರೂಪಾಯಿ ಅನುಕೂಲವಾಗಿದೆ. ಅವರು ಬ್ಯಾಂಕ್‌ನಿಂದ ಹಣ ಪಡೆದು ವಾಪಸ್‌ ಮಾಡಿಲ್ಲ ಹಾಗೂ ರಫೇಲ್‌ ಕಾಂಟ್ರಾಕ್ಟ್‌ ಕೂಡ ಸಿಕ್ಕಿತು. ಮೋದಿ ತಬ್ಬಿಕೊಳ್ಳುವುದು ಇಂಥ ಅನಿಲ್‌ ಅಂಬಾನಿ, ಚೋಕ್ಸಿ, ನೀರವ್ ಮೋದಿಯಂತಹ ವ್ಯಕ್ತಿಗಳನ್ನು.

ಆದರೆ, ಅವರು ಬಡವರನನ್ನು ಅಪ್ಪಿರುವುದು ನೋಡಿದ್ದೀರಾ?ರೈತರನ್ನು ತಬ್ಬಿರುವುದು ಎಂದಾದರೂ ನೋಡಿದ್ದೀರಾ? ಎಂಬ ಪ್ರಶ್ನೆಗಳಿಗೆ ಸಭಿಕರು ’ಇಲ್ಲ...ಇಲ್ಲ..’ ಎಂದು ಪ್ರತಿಕ್ರಿಯಿಸಿದರು.

ಹಣಕೊಳ್ಳೆ ಹೊಡೆದಿರುವವರು ಮೋದಿ ಸ್ನೇಹಿತರು. ಬಡವರು, ನಿರುದ್ಯೋಗಿಗಳು, ರೈತರು ನನ್ನ ಸ್ನೇಹಿತರು ಎಂದರು.

ರೈತರಿಗೆ ಪ್ರತ್ಯೇಕ ಬಜೆಟ್‌
ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆವು. ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಗೂ ಮೈತ್ರಿ ಸರ್ಕಾರದಿಂದ ಸಾಲ ಮನ್ನಾ ಆಗಿದೆ. ಸರ್ಕಾರ ಅಧಿಕಾರ ವಹಿಸಿ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಕರ್ನಾಟಕ ಮಾತ್ರವಲ್ಲದೇ ಕಾಂಗ್ರೆಸ್‌ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲಿಯೂ ಸಾಲ ಮನ್ನಾ ಮಾಡಿದ್ದೇವೆ.

ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ರೈತರು, ಕೃಷಿಕರಿಗಾಗಿಯೇ ಪ್ರತ್ಯೇಕ ಬಜೆಟ್‌ ಮಂಡನೆ ಮಾಡಲಿದ್ದೇವೆ. ರೈತರಿಗೆ ಮುಂಚೆಯೇ ಎಲ್ಲ ಮಾಹಿತಿಯು ಇದರಿಂದ ಸ್ಪಷ್ಟವಾಗಿ ತಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.