ADVERTISEMENT

ಕಳ್ಳರಿಗೆ ಸಹಾಯ ಮಾಡುವ ಚೌಕೀದಾರ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

‘ಸ್ಟ್ಯಾಂಡಪ್‌ ಇಂಡಿಯಾ, ಕುಳಿತುಕೊಳ್ಳಿ ಇಂಡಿಯಾ ಎನ್ನುವ ಮೋದಿ ಏನು ಮಾಡುತ್ತಾರೋ ಗೊತ್ತಿಲ್ಲ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 10:10 IST
Last Updated 9 ಮಾರ್ಚ್ 2019, 10:10 IST
   

ಹಾವೇರಿ:ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಕಳ್ಳರಿಗೆ ಸಹಾಯ ಮಾಡಿ. ನಾವು ಬಡವರಿಗೆ ಸಹಾಯ ಮಾಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಲೋಕಸಭಾ ಚುನಾವಣಾ ಪ್ರಚಾರಾರ್ಥ ನಗರದಲ್ಲಿ ಪರಿವರ್ತನಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ಪರಾರಿಯಾಗಿರುವ ನೀರವ್ ಮೋದಿ, ಮೆಹುಲ್ ಚೊಕ್ಸಿಯಂತಹವರಿಗೆ ಪ್ರಧಾನಿ ಮೋದಿ ನೆರವಾಗುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿಯವರು ಮಾತುಮಾತಿಗೆ ಮೇಕ್‌ ಇನ್‌ ಇಂಡಿಯಾ, ಸ್ಟ್ಯಾಂಡಪ್‌ ಇಂಡಿಯಾ, ಕುಳಿತುಕೊಳ್ಳಿ ಇಂಡಿಯಾ ಎನ್ನುತ್ತಾರೆ. ಆದರೆ, ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ರಾಹುಲ್ ವ್ಯಂಗ್ಯವಾಡಿದರು.

ADVERTISEMENT

ಮೋದಿ ಅವರು ನೋಟ್‌ ಬ್ಯಾನ್‌ ಮತ್ತು ಗಬ್ಬರ್ ಸಿಂಗ್‌ ಟ್ಯಾಕ್ಸ್‌ ಜಾರಿಗೆ ತರುವ ಮೂಲಕ ಸಾಮಾನ್ಯ ಜನರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆದಾರರಿಗೆ ತೊಂದರೆ ನೀಡಿದರು ಎಂದೂ ಅವರು ಆರೋಪಿಸಿದರು.

‘ದೇಶವನ್ನು ಒಡೆಯುವ ಬಿಜೆಪಿ’: ಬಿಜೆಪಿ ಮತ್ತು ಆ ಪಕ್ಷದ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಮೋದಿ ಅವರು ಎರಡು ಹಿಂದೂಸ್ತಾನ ಸೃಷ್ಟಿಸಲು ಮುಂದಾಗಿದ್ದಾರೆ. ಒಂದರಲ್ಲಿ ಅವರ ಸ್ನೇಹಿತರಾದ ಲಲಿತ್ ಮೋದಿ, ನೀರವ್ ಮೋದಿ ಅವರಿಗೆ ಅವಕಾಶ ನೀಡಲಿದ್ದಾರೆ. ಮತ್ತೊಂದರಲ್ಲಿ ಬಡವರು, ಶೋಷಿತರು ಇದ್ದಾರೆ. ಇದರಲ್ಲಿ ನಿರುದ್ಯೋಗ, ಅನ್ಯಾಯ ಇತ್ಯಾದಿ ಸಮಸ್ಯೆಗಳಿವೆ. ಶ್ರೀಮಂತರ ಮಕ್ಕಳಿಗೆ ಉತ್ತಮ ಶಿಕ್ಷಣ, ವೈದ್ಯಕೀಯ ಸೌಲಭ್ಯ ದೊರೆಯುತ್ತಿದೆ. ಆದರೆ, ಬಡವರು ಏನು ಮಾಡಬೇಕು? ಕಾಂಗ್ರೆಸ್ ಪಕ್ಷವು ಎಂದೂ ದೇಶವನ್ನು ಒಡೆಯುವುದಿಲ್ಲ. ಬದಲಿಗೆ ಒಂದುಗೂಡಿಸಲಿದೆ. ಎಲ್ಲರಿಗೂ ಒಂದೇ ರೀತಿಯ ಹಿಂದೂಸ್ತಾನ ನೀಡಲಿದೆ. ಎಲ್ಲರಿಗೂ ಒಂದೇ ಕಾನೂನು ಇರಲಿದೆ. ನೀರವ್ ಮೋದಿ, ಮೆಹುಲ್ ಚೊಕ್ಸಿಯನ್ನು ಜೈಲಿಗೆ ತಳ್ಳಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

‘ಬಡವರ ಖಾತೆಗೆ ದುಡ್ಡು ಹಾಕಲಿದ್ದೇವೆ’: ಮೋದಿ ಅವರು ಅಂಬಾನಿ, ಅದಾನಿ ಅವರ ಖಾತೆಗೆ ದುಡ್ಡು ಹಾಕಿದರೆ ನಾವು ಬಡವರ ಖಾತೆಗೆ ದುಡ್ಡು ಹಾಕಲಿದ್ದೇವೆ. ಪ್ರತಿಯೊಬ್ಬ ಬಡ ವ್ಯಕ್ತಿಗೂ ಕನಿಷ್ಠ ಆದಾಯ ನೀಡಲಿದ್ದೇವೆ. ಪ್ರತಿ ತಿಂಗಳು ನೇರವಾಗಿ ಬಡ ಜನರ ಖಾತೆಗೆ ಹಣ ಹಾಕಲಿದ್ದೇವೆ. ಛತ್ತೀಸಗಡದಲ್ಲಿ ಈಗಾಗಲೇ ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ರಾಹುಲ್ ಹೇಳಿದರು.

ಕಾಂಗ್ರೆಸ್ ಯಾವತ್ತೂ ಕೂಡ ಕ್ರಾಂತಿಕಾರಕ ನಿರ್ಣಯಗಳನ್ನೇ ಕೈಗೊಂಡಿದೆ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಕಾಂಗ್ರೆಸ್‌ ಆಡಳಿತಾವಧಿಯಲ್ಲೇ ಆಗಿವೆ. ಆದರೆ, ಮೋದಿ ಆರ್ಥಿಕ ನೀತಿಗಳಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನಷ್ಟ ಅನುಭವಿಸುವಂತಾಗಿವೆ ಎಂದು ಅವರು ದೂರಿದರು.

‘ಕಣ್ಣಲ್ಲಿ ಕಣ್ಣಿಟ್ಟು ನೋಡದ ಮೋದಿ’: ಮೋದಿ ಅವರಿಗೆ ಸಂಸತ್‌ನಲ್ಲಿ ನಾನು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೆ. ಆದರೆ, ಒಂದೂವರೆ ಗಂಟೆ ಭಾಷಣ ಮಾಡಿದ ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲೇ ಇಲ್ಲ. ಉತ್ತರಿಸುವುದು ಬಿಡಿ, ಕಣ್ಣಲ್ಲಿ ಕಣ್ಣಿಟ್ಟು ನನ್ನನ್ನು ನೋಡುವ ಧೈರ್ಯವನ್ನೇ ಮಾಡಲಿಲ್ಲ. ಒಮ್ಮೆ ಮೇಲೆ, ಕೆಳಗೆ, ಆಚೆ, ಈಚೆ ನೋಡುತ್ತಾ ಮಾತನಾಡಿದರೇ ವಿನಹ ಉತ್ತರ ನೀಡಲಿಲ್ಲ ಎಂದು ರಾಹುಲ್ ಹೇಳಿದರು.

‘ಭಾಷಣದಲ್ಲೇ ಕಾಲ ಕಳೆವ ಮೋದಿ’: ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಮೋದಿ ಆಡಳಿತಾವಧಿಯಲ್ಲಿದೆ. ಐದು ವರ್ಷಗಳಿಂದ ಭಾಷಣವನ್ನೇ ಮಾಡುತ್ತಾ ಇರುವ ಮೋದಿಯವರು ಉದ್ಯೋಗ ಸೃಷ್ಟಿ ಯಾಕೆ ಮಾಡಿಲ್ಲ? ಹೆಚ್ಚು ಬೆಲೆಗೆ ರಫೇಲ್ ಯುದ್ಧವಿಮಾನ ಖರೀದಿಸಲು ಒಪ್ಪಂದ ಮಾಡಿಕೊಂಡದ್ದನ್ನು ಯಾಕೆ ಜನರ ಮುಂದೆ ಹೇಳುತ್ತಿಲ್ಲ? ಎಂದು ರಾಹುಲ್ ಪ್ರಶ್ನಿಸಿದರು.

ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗಷ್ಟೇ ಮೋದಿಯಿಂದ ಪ್ರಯೋಜನವಾಗುತ್ತಿದೆ. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ಎಸಗಿದ ಮೋದಿ ಅಂಬಾನಿ ಜೇಬಿಗೆ ದುಡ್ಡು ತುಂಬಿದರು. ನೀರವ್ ಮೋದಿ, ಮೆಹುಲ್ ಚೊಕ್ಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿ ದೇಶ ತೊರೆದರು. ಆಗ ಈ ಚೌಕೀದಾರ ಏನು ಮಾಡಿದರು? ಎಂದೂ ಅವರು ಪ್ರಶ್ನಿಸಿದರು.

‘ಮಸೂದ್ ಅಜರ್‌ನನ್ನು ಪಾಕ್‌ಗೆ ಬಿಟ್ಟವರಾರು?’

ಪುಲ್ವಾಮಾ ದಾಳಿಯ ಸಂಚುಕೋರ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದವರು ಯಾರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

‘ಬಿಜೆಪಿ ಸರ್ಕಾರವೇ ಆತನನ್ನು ಕಂದಹಾರ್‌ಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿತ್ತಲ್ಲವೇ? ಅದನ್ನು ಮರೆತಿರಾ ಮೋದಿಯವರೇ’ ಎಂದು ಅವರು ಕುಹಕವಾಡಿದರು.

‘ರೈತರಿಗೆ ಮೋದಿ ಕೊಡುಗೆಯೇನು?’

ಕೆಲ ದಿನಗಳ ಹಿಂದೆ ಮೋದಿ ಅವರು ಕರ್ನಾಟಕಕ್ಕೆ ಬಂದು ಇಲ್ಲಿನ ಸರ್ಕಾರ ರೈತರಿಗೆ ಲಾಲಿಪಪ್ ಕೊಟ್ಟಿದೆ ಎಂದು ಟೀಕಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದು ಐದು ವರ್ಷಗಳಾದವು. ರೈತರಿಗೆ ಏನು ಮಾಡಿದರು? ನಾವು ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ರಾಹುಲ್ ಹೇಳಿದರು.

‘ಒಗ್ಗಟ್ಟಿನಿಂದ ಚುನಾವಣೆ ಗೆಲ್ಲುತ್ತೇವೆ’

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಒಗ್ಗಟ್ಟಿನಿಂದ ಇದೆ. ದೇಶದ ಉಳಿವಿಗೆ ಜೆಡಿಎಸ್‌, ಕಾಂಗ್ರೆಸ್‌ ಜತೆಯಾಗಿ ಕೆಲಸ ಮಾಡಲಿವೆ. ಕರ್ನಾಟಕದ ಒಳಿತಿಗಾಗಿಯೂ ಕೆಲಸ ಮಾಡಲಿದ್ದೇವೆ. ಎರಡೂ ಪಕ್ಷಗಳು ಜತೆಯಾಗಿ ಚುನಾವಣೆ ಎದುರಿಸಿ ಗೆಲ್ಲಲಿದ್ದೇವೆ ಎಂದು ರಾಹುಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.