
ಬೆಂಗಳೂರು: ‘ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ರಾಹುಲ್‌ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಪುಸ್ತಕದಲ್ಲಿನ ವಿಷಯಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಸಂಸತ್ತಿನಲ್ಲಿ ಅದರ ಚರ್ಚೆಗೆ ಅವಕಾಶ ನೀಡಿಲ್ಲ ಎಂದಿದ್ದಾರೆ.
2020 ರಲ್ಲಿ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಸರ್ಕಾರ ದಿಟ್ಟ ಮತ್ತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲವಾಯಿತು ಎನ್ನುವ ಮಾಹಿತಿ ಈ ಪುಸ್ತಕದಲ್ಲಿದೆ. ಸರ್ಕಾರದ ಈ ದ್ವಂದ್ವ ನಿಲುವಿನಿಂದ ಸೇನಾ ಪಡೆಗಳು ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಯನ್ನು ನಿಭಾಯಿಸಬೇಕಾಯಿತು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಾಜಕೀಯ ನಾಯಕತ್ವದ ವೈಫಲ್ಯ ಮತ್ತು ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಇರುವ ಅಸಾಮರ್ಥ್ಯ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇಂತಹ ವಿಷಯಗಳು ಸಂಸತ್ತಿನಲ್ಲಿ ಚರ್ಚೆಗೆ ಒಳಪಡಬೇಕು. ಜನರ ಪರವಾಗಿ ಪ್ರಶ್ನೆಗಳನ್ನು ಕೇಳುವುದು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯವರ ಕರ್ತವ್ಯ. ಅದನ್ನು ಅವರು ಮಾಡಿದ್ದಾರೆ. ರಾಹುಲ್‌ಗಾಂಧಿ ಭಾರತ ಅಥವಾ ನಮ್ಮ ಸೇನಾಪಡೆಗಳ ವಿರುದ್ಧ ಮಾತನಾಡಿಲ್ಲ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.