ADVERTISEMENT

ಯಶಸ್ವಿಯಾಗಿ ಓಡಿದ ಲೊಕೊ ರೈಲು

ಬಳ್ಳಾರಿ–ಹೊಸಪೇಟೆ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕೆಲಸ ಪೂರ್ಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 13:55 IST
Last Updated 19 ಜುಲೈ 2019, 13:55 IST
ಲೊಕೊ ರೈಲು ದರೋಜಿ ನಿಲ್ದಾಣ ಬಂದು ಸೇರಿದ ಕ್ಷಣ
ಲೊಕೊ ರೈಲು ದರೋಜಿ ನಿಲ್ದಾಣ ಬಂದು ಸೇರಿದ ಕ್ಷಣ   

ಹೊಸಪೇಟೆ: ಬಳ್ಳಾರಿ–ಹೊಸಪೇಟೆ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕೆಲಸ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ಪ್ರಯೋಗಾರ್ಥ ಲೊಕೊ ರೈಲನ್ನು ಯಶಸ್ವಿಯಾಗಿ ಓಡಿಸಲಾಗಿದೆ.

69 ಕಿ.ಮೀ ಮಾರ್ಗದ ವಿದ್ಯುದ್ದೀಕರಣಕ್ಕೆ ₹139.43 ಕೋಟಿ ವೆಚ್ಚ ಮಾಡಲಾಗಿದೆ. ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ಬಳ್ಳಾರಿಯಿಂದ ಹೊರಟ ಲೊಕೊ ರೈಲು ಹೊಸಪೇಟೆ ಸಮೀಪದ ದರೋಜಿ ನಿಲ್ದಾಣಕ್ಕೆ ಮಧ್ಯಾಹ್ನ 1.33ಕ್ಕೆ ಬಂದು ಸೇರಿತು. ದರೋಜಿಯಿಂದ 1.49ಕ್ಕೆ ಪ್ರಯಾಣ ಬೆಳೆಸಿ 2.20ಕ್ಕೆ ಬಳ್ಳಾರಿ ಸೇರಿತು.ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ ಮೋಹನ್‌, ರೈಲ್‌ ವಿಕಾಸ್‌ ನಿಗಮ ಲಿಮಿಟೆಡ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜೆ.ಆರ್‌. ಶ್ರೀನಿವಾಸ್‌, ಹಿರಿಯ ಎಲೆಕ್ಟ್ರಿಕಲ್‌ ವಿಭಾಗೀಯ ಎಂಜಿನಿಯರ್‌ ವಂಶಿ ಕೃಷ್ಣ ಇದ್ದರು.

ಹೊಸಪೇಟೆ–ಗದಗ ನಡುವೆ ಕಾಮಗಾರಿ ಪ್ರಗತಿಯಲ್ಲಿದೆ.ಬಳ್ಳಾರಿ–ಹೊಸಪೇಟೆ–ತೋರಣಗಲ್ಲು ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ರೈಲ್ವೆ ಮಂಡಳಿ 2012–13ರಲ್ಲಿ ಒಪ್ಪಿಗೆ ನೀಡಿತ್ತು.

ADVERTISEMENT

‘ಬಳ್ಳಾರಿ ಹಾಗೂ ಹೊಸಪೇಟೆ ಅನೇಕ ಉಕ್ಕಿನ ಕಾರ್ಖಾನೆಗಳನ್ನು ಹೊಂದಿವೆ. ಈ ಮಾರ್ಗದ ಮೂಲಕ ಕಚ್ಚಾ ವಸ್ತು ಹಾಗೂ ಉಕ್ಕಿನ ಉತ್ಪನ್ನಗಳನ್ನು ಬೇರೆಡೆ ಸಾಗಿಸಲಾಗುತ್ತದೆ. ಈ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿರುವ ಕಾರಣ ರೈಲುಗಳು ಕಡಿಮೆ ಅವಧಿಯಲ್ಲಿ ಸಂಚರಿಸಬಹುದು. ಹಣದ ಜತೆಗೆ ಸಮಯ ಉಳಿತಾಯವಾಗಲಿದೆ. ಪರಿಸರ ಮಾಲಿನ್ಯ ಕೂಡ ಉಂಟಾಗುವುದಿಲ್ಲ’ ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.