ರೈಲ್ ಒನ್
ಬೆಂಗಳೂರು: ರೈಲು ಪ್ರಯಾಣವನ್ನು ಪ್ರಯಾಣಿಕರ ಸ್ನೇಹಿಯಾಗಿಸಲು ‘ರೈಲ್‌ಒನ್ ಮೊಬೈಲ್ ಅಪ್ಲಿಕೇಷನ್’ ಅನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ. ಎಲ್ಲ ರೈಲ್ವೆ ಸೇವೆಗಳನ್ನು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸುವ ಸಮಗ್ರ ಆಲ್-ಇನ್-ಒನ್ ಮೊಬೈಲ್ ಅಪ್ಲಿಕೇಶನ್ ಇದಾಗಿದೆ.
ಈ ಏಕೀಕೃತ ಅಪ್ಲಿಕೇಷನ್ ಐಆರ್‌ಟಿಸಿ, ಯುಟಿಎಸ್, ಎನ್‌ಟಿಇಎಸ್, ಫುಡ್ ಟ್ರ್ಯಾಕ್ ಮುಂತಾದ ಮೊಬೈಲ್ ಅಪ್ಲಿಕೇಶನ್‌ಗಳ ವೈಶಿಷ್ಟ್ಯಗಳನ್ನು ಒಟ್ಟುಗೂಡಿಸಿ ‘ರೈಲ್‌ಒನ್ ಮೊಬೈಲ್ ಅಪ್ಲಿಕೇಷನ್’ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರು ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್‌ಗಳ ಬುಕ್ಕಿಂಗ್, ರೈಲಿನ ಟ್ರ್ಯಾಕಿಂಗ್, ಪಿಎನ್‌ಆರ್ ಪರಿಶೀಲನೆ, ಕೋಚ್ ಸ್ಥಾನಗಳ ಮಾಹಿತಿ, ಆಹಾರ ಆರ್ಡರ್, ದೂರುಗಳ ನೋಂದಣಿ, ಟಿಕೆಟ್ ಮರುಪಾವತಿ ಮುಂತಾದವುಗಳನ್ನು ಈ ಆ್ಯಪ್ ಮೂಲಕ ನಿರ್ವಹಿಸಬಹುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಐಆರ್‌ಸಿಟಿಸಿ ಮತ್ತು ಯುಟಿಎಸ್‌ನಲ್ಲಿ ಈಗಾಗಲೇ ನೋಂದಾಯಿಸಿರುವ ಬಳಕೆದಾರರು ಪ್ರತ್ಯೇಕ ನೋಂದಣಿ ಅಗತ್ಯವಿಲ್ಲದೆ ರೈಲ್ ಒನ್ ಅಪ್ಲಿಕೇಷನ್‌ನಲ್ಲಿ ನೇರವಾಗಿ ಲಾಗಿನ್ ಆಗಬಹುದು. ಭಾರತೀಯ ರೈಲ್ವೆಯ ಆಂತರಿಕ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಆರ್ ವ್ಯಾಲೆಟ್‌ನಲ್ಲಿ ಪಾವತಿ ಮಾಡಿದರೆ ಶೇ 3ರಷ್ಟು ರಿಯಾಯಿತಿ ಸಿಗಲಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ರೈಲ್ ಒನ್ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.