ನವದೆಹಲಿ: ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಯ ವಿಳಂಬಕ್ಕೆ ರಾಜ್ಯ ಸರ್ಕಾರವನ್ನು ದೂಷಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ‘ರಾಜ್ಯ ಸರ್ಕಾರದಿಂದ ಭೂಮಿ ಹಸ್ತಾಂತರ ವಿಳಂಬವಾಗಿದೆ. ಜತೆಗೆ, ಕೆ–ರೈಡ್‌ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನೂ ನೇಮಿಸಿಲ್ಲ’ ಎಂದು ಕಿಡಿಕಾರಿದರು.
ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪ್ರಶ್ನೆಗೆ ಉತ್ತರ ನೀಡಿರುವ ಅವರು, ‘ರೈಲ್ವೆ ಇಲಾಖೆಯು ಕೆ–ರೈಡ್‌ಗೆ ಭೂಮಿ ಹಸ್ತಾಂತರ ಮಾಡಿದೆ. ಆದರೆ, ರಾಜ್ಯ ಸರ್ಕಾರದಿಂದ ಭೂಮಿ ಹಸ್ತಾಂತರ ಭಾರಿ ವಿಳಂಬವಾಗಿದೆ’ ಎಂದರು.
‘ಪ್ರಸ್ತುತ ಕೆ-ರೈಡ್‌ನಲ್ಲಿ ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟ ಅರೆಕಾಲಿಕ ವ್ಯವಸ್ಥಾಪಕ ನಿರ್ದೇಶಕರು ಯೋಜನೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ರೈಲ್ವೆ ತಂತ್ರಜ್ಞಾನದ ಬಗ್ಗೆ ಪರಿಣತಿ ಹೊಂದಿರುವ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವ ಅವಶ್ಯಕತೆ ಇದೆ’ ಎಂದು ಅವರು ಪ್ರತಿಪಾದಿಸಿದರು.
‘ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಕಾರಿಡಾರ್ನ 25.01 ಕಿ.ಮೀ ಮತ್ತು ಹೀಲಳಿಗೆ-ರಾಜಾನುಕುಂಟೆ ನಡುವಿನ ಕಾರಿಡಾರ್ನ 46.25 ಕಿ.ಮೀ. ಕೆಲಸ ಪ್ರಗತಿಯಲ್ಲಿದೆ. ಕೆಎಸ್ಆರ್– ದೇವನಹಳ್ಳಿ ನಡುವಿನ ಕಾರಿಡಾರ್ನ 41.4 ಕಿ.ಮೀ. ಮತ್ತು ಕೆಂಗೇರಿ–ವೈಟ್‌ಫೀಲ್ಡ್ ನಡುವಿನ ಕಾರಿಡಾರ್ನ 35.52 ಕಿ.ಮೀ ಕಾಮಗಾರಿಗಾಗಿ ಪ್ರಾಥಮಿಕ ಕೆಲಸಗಳು ಪ್ರಾರಂಭವಾಗಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.