ADVERTISEMENT

ಕೆಲಸದ ಆಮಿಷವೊಡ್ಡಿ 30 ಅಭ್ಯರ್ಥಿಗಳಿಗೆ ವಂಚನೆ: ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:30 IST
Last Updated 16 ಆಗಸ್ಟ್ 2022, 21:30 IST

ಬೆಂಗಳೂರು: ರೈಲ್ವೆ ಇಲಾಖೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ಕೆಲಸ ಕೊಡಿಸುವುದಾಗಿ ಹೇಳಿ 30ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ವಂಚನೆ ಬಗ್ಗೆ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಗಳಾದ ಶ್ರೇಯಾಂಶ್ ಬೋಗರ್, ಅಜಿತ್ ಕುಮಾರ್, ಅರುಣ್ ಹಾಗೂ ವಿಠ್ಠಲ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇವರನ್ನು ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿವೆ.

‘ದೂರುದಾರ ನಿವೃತ್ತ ಅಧಿಕಾರಿ, ತರಬೇತಿ ಸಂಸ್ಥೆ ನಡೆಸುತ್ತಿದ್ದಾರೆ. ಇವರಿಗೆ ಆರೋಪಿ ಶ್ರೇಯಾಂಶ್ ಹಾಗೂ ಇತರರ ಪರಿಚಯವಾಗಿತ್ತು. ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿಗಳು ಹೇಳಿದ್ದರು. ಇದನ್ನು ನಂಬಿದ್ದ ನಿವೃತ್ತ ಅಧಿಕಾರಿ, ಸ್ನೇಹಿತರು ಹಾಗೂ ಪರಿಚಯಸ್ಥರಿಗೆ ವಿಷಯ ತಿಳಿಸಿದ್ದರು. ಅವರ ಮೂಲಕ 30ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ತಲಾ ₹2 ಲಕ್ಷದಿಂದ ₹ 10 ಲಕ್ಷ ಸಂಗ್ರಹಿಸಿ ಆರೋಪಿಗಳಿಗೆ ಕೊಟ್ಟಿದ್ದರು.’

ADVERTISEMENT

‘ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಆರೋಪಿಗಳು, ನಕಲಿ ದಾಖಲೆಗಳನ್ನು ಅಭ್ಯರ್ಥಿಗಳಿಗೆ ನೀಡಿದ್ದರು. ನೇಮಕಾತಿ ಆದೇಶ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ, ಆರೋಪಿಗಳು ಇದುವರೆಗೂ ಯಾವುದೇ ಆದೇಶ ನೀಡಿಲ್ಲ. ಇದನ್ನು ಪ್ರಶ್ನಿಸಿದರೆ ಜೀವ ಬೆದರಿಕೆಯೊಡ್ಡುತ್ತಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.