ADVERTISEMENT

‘ಕಾವೇರಿ ನಾಡಿ’ನಲ್ಲೇ ಮುಂಗಾರು ಮುನಿಸು 

ಕೊಡಗಿನಲ್ಲಿ ಮಳೆ ಕೊರತೆ, ಜೂನ್‌ನಲ್ಲಿ ಬಿಸಿಲು ವಾತಾವರಣ

ಅದಿತ್ಯ ಕೆ.ಎ.
Published 26 ಜೂನ್ 2019, 13:15 IST
Last Updated 26 ಜೂನ್ 2019, 13:15 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಸ್ಥಿತಿ 
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಸ್ಥಿತಿ    

ಮಡಿಕೇರಿ: ಜೂನ್‌ ತಿಂಗಳು ಅಂತ್ಯವಾಗಲು ಬಂದರೂ ‘ಕಾವೇರಿ ನಾಡಿ’ನಲ್ಲಿ ಮುಂಗಾರು ಮಳೆ ಇನ್ನೂ ಚುರುಕು ಪಡೆದಿಲ್ಲ. ಕಳೆದ ವರ್ಷ ಈ ವೇಳೆಗೆ ಕೊಡಗಿನಲ್ಲಿ ವಾಡಿಕೆಗೂ ಮೀರಿ ಮಳೆ ಸುರಿದು, ಅಲ್ಲಲ್ಲಿ ಪ್ರವಾಹದ ಸ್ಥಿತಿ ತಲೆದೋರಿತ್ತು. ಅಂತರ್ಜಲವೂ ಕಾಣಿಸಿತ್ತು. ಈ ಬಾರಿ ಜಿಲ್ಲೆಯಲ್ಲಿ ವ್ಯತಿರಿಕ್ತ ಪರಿಸ್ಥಿತಿಯಿದ್ದು ಬೇಸಿಗೆಯಂತೆ ಬಿಸಿಲು ಕಾಣಿಸುತ್ತಿದೆ.

ಭಾಗಮಂಡಲ, ತಲಕಾವೇರಿ ವಾಪ್ತಿಯಲ್ಲೇ ಸಾಧಾರಣ ಮಳೆಯಷ್ಟೇ ಸುರಿದಿದೆ. ಇದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟವು ಏರಿಕೆಯಾಗಿಲ್ಲ. ತ್ರಿವೇಣಿ ಸಂಗಮ ಭರ್ತಿಗೊಂಡು ನೀರು ಹರಿಯಲು ಆರಂಭಿಸಿದರೆ ಕಾವೇರಿ ನದಿಯಲ್ಲೂ ನೀರಿನಮಟ್ಟ ಏರಿಕೆಯಾಗಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಒಡಲು ಸೇರಲು ಸಾಧ್ಯ. ಮುಂಗಾರು ಮುನಿಸಿನಿಂದ ಜಿಲ್ಲೆಯಲ್ಲಿ ನೀರಿನ ಕೊರತೆ ಕಾಣಿಸುತ್ತಿದೆ.

ಜುಲೈನಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ ಸಂಕಷ್ಟಕ್ಕೆ ಸಿಲುಕಬೇಕಾದ ಸ್ಥಿತಿ ಬರಲಿದೆ. ಬೇಸಿಗೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ಬಳ್ಳಿಗಳನ್ನು ಉಳಿಸಿಕೊಳ್ಳುವುದೇ ಸವಾಲು ಆಗಲಿದೆ ಎಂದು ರೈತ ನಂಜಪ್ಪ ಹೇಳಿದರು.

ADVERTISEMENT

ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಬ್ರಹ್ಮಗಿರಿ ವ್ಯಾಪ್ತಿಯಲ್ಲೂ ವಾಡಿಕೆ ಮಳೆ ಸುರಿಯದೇ ಲಕ್ಷ್ಮಣತೀರ್ಥ ನದಿಯು ಭಣಗುಡುತ್ತಿದೆ. ಲಕ್ಷ್ಮಣತೀರ್ಥ ನದಿಯ ನೀರು ಕೆಆರ್‌ಎಸ್‌ ಸೇರುತ್ತದೆ.

ಭತ್ತದ ಕೃಷಿಗೂ ಹಿನ್ನಡೆ:ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿಯಿದೆ. 5 ಸಾವಿರ ಹೆಕ್ಟೇರ್‌ನಲ್ಲಿ ಸಸಿ ಮಡಿ ಮಾಡಲು ನೀರಿನ ಕೊರತೆ ಎದುರಾಗಿದೆ. ಕಳೆದ ವರ್ಷ ವಿಪರೀತ ಮಳೆಯಿಂದ ಭತ್ತದ ಬೆಳೆ ನಷ್ಟವಾಗಿತ್ತು. ಈ ಬಾರಿ ಮಳೆ ಕೊರತೆಯಿಂದ ಭತ್ತದ ಕೃಷಿಗೆ ಹಿನ್ನಡೆ ಉಂಟಾಗಿದೆ.

ಜೂನ್‌ ಅಂತ್ಯಕ್ಕೆ ಸಸಿ ಮಡಿ ಕೆಲಸ ಮುಗಿದು, ಜುಲೈನಲ್ಲಿ ನಾಟಿ ಕಾರ್ಯ ಮಾಡಬೇಕಿತ್ತು. ಮಳೆಯಾಶ್ರಿತ ಗದ್ದೆಗಳಲ್ಲಿ ಸಸಿ ಮಡಿ ಕಾರ್ಯವು ‍ಪ್ರಗತಿ ಕಂಡಿಲ್ಲ. ನೀರಾವರಿ ವ್ಯವಸ್ಥೆಯಿದ್ದವರೂ ಮಾತ್ರ ಗದ್ದೆ ಕೆಲಸ ಆರಂಭಿಸಿದ್ದು ಅವರಿಗೂ ಜುಲೈ ತಿಂಗಳಲ್ಲಿ ಜೋರು ಮಳೆಯ ಅಗತ್ಯವಿದೆ. ಕೆಲವು ಭಾಗದಲ್ಲಿ ಕಾಫಿ ತೋಟಕ್ಕೆ ರಸಗೊಬ್ಬರ ಹಾಕಲೂ ನಿರೀಕ್ಷಿತ ಮಳೆಯಾಗಿಲ್ಲ.

ವಾಡಿಕೆ ಮಳೆಯೂ ಆಗಿಲ್ಲ:ಜೂನ್‌ನಲ್ಲಿ ವಾಡಿಕೆ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಜನವರಿ ಆರಂಭದಿಂದ ಜೂನ್‌ 26ರ ತನಕ 2018ರಲ್ಲಿ 1,198 ಮಿ.ಮೀ ಮಳೆ ಸುರಿದಿತ್ತು. ಈ ಬಾರಿ ಇದೇ ಅವಧಿಯಲ್ಲಿ 357 ಮಿ.ಮೀ ಮಳೆಯಷ್ಟೇ ಸುರಿದಿದೆ. ಭಾಗಮಂಡಲದಲ್ಲಿ ಕಳೆದ ವರ್ಷ ಇದೇ ಅವಧಿಗೆ 2,225 ಮಿ.ಮೀ ಮಳೆಯಾಗಿ ಮೂರು ಬಾರಿ ಪ್ರವಾಹ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.