ADVERTISEMENT

ರಾಜ್ಯದಲ್ಲಿ ಸತತ ಮಳೆ: ಮೈದುಂಬಿದ ನದಿಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 19:04 IST
Last Updated 15 ಜುಲೈ 2024, 19:04 IST
<div class="paragraphs"><p>ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಸೋಮವಾರ ಮುಳುಗಡೆಯಾಯಿತು</p></div>

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಸೋಮವಾರ ಮುಳುಗಡೆಯಾಯಿತು

   

ಮಂಗಳೂರು/ಶಿವಮೊಗ್ಗ: ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ನದಿಗಳು ಮೈದುಂಬಿದ್ದರೆ, ಜಲಪಾತಗಳು ಧುಮ್ಮಿಕ್ಕುತ್ತಿವೆ.

ಭಾರಿ ಮಳೆಯ ಕಾರಣ ಹಾಸನ ಜಿಲ್ಲೆಯ ಕೆಲವೆಡೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 16ರಂದು ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿದು ಸ್ನಾನಘಟ್ಟ ಮುಳುಗಡೆಯಾಗಿದೆ. ನದಿಯಲ್ಲಿ ತೀರ್ಥಸ್ನಾನ ಮಾಡದಂತೆ ಯಾತ್ರಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, 
ತೀರ್ಥಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ ಬಾಂದಾರ ಕೃಷ್ಣಾ ನದಿಯಲ್ಲಿ ಕೊಚ್ಚಿಹೋಗಿದೆ

ಮಳೆ, ಗಾಳಿಗೆ ಉಡುಪಿ ನಗರದ ದೊಡ್ಡಣಗುಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯ ಒಂದು ಬದಿಯ ಗೋಡೆ ಭಾನುವಾರ ರಾತ್ರಿ ಕುಸಿದು ಬಿದ್ದಿದೆ.

ನೀರಿನ ಹರಿವು ಹೆಚ್ಚಳ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದ್ದು, ಜಲಪಾತ ಮತ್ತು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಹೇಮಾವತಿ, ತುಂಗಾ, ಭದ್ರಾ, ವೇದಾವತಿ, ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ರಸ್ತೆಗೆ ಮರ ಬಿದ್ದು ಕೊಪ್ಪ–ಜಯಪುರ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. 

ಮಳೆಯ ಆರ್ಭಟಕ್ಕೆ ವರದಾ, ಕುಮದ್ವತಿ ಹಾಗೂ ಶರಾವತಿ ನದಿಗಳು ಮೈದುಂಬಿವೆ. ಗಾಜನೂರು ಬಳಿಯ ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ 21 ಕ್ರಸ್ಟ್‌ಗೇಟ್‌ಗಳನ್ನೂ ತೆರೆಯಲಾಗಿದೆ. ಜಲಾಶಯಕ್ಕೆ 33,000 ಕ್ಯುಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. 

ಭದ್ರಾ ಜಲಾಶಯಕ್ಕೆ 16,041 ಕ್ಯುಸೆಕ್ ಒಳಹರಿವು ಇದೆ. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 141.3 ಅಡಿ ನೀರಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ 141.3 ಅಡಿ ನೀರಿತ್ತು.

ವರದಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಸಾಗರ ತಾಲ್ಲೂಕಿನಲ್ಲಿ ನೂರಾರು ಎಕರೆ ಗದ್ದೆಗಳು ಜಲಾವೃತವಾಗಿವೆ. ಕುಮುದ್ವತಿಯಲ್ಲೂ ನೀರಿನ ಹರಿವು ಹೆಚ್ಚಿದೆ.

ಲಿಂಗನಮಕ್ಕಿ ಒಳಹರಿವು ಭಾರಿ ಏರಿಕೆ: ಲಿಂಗನಮಕ್ಕಿ ಜಲಾಶಯಕ್ಕೆ 45,115 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಸದ್ಯ 1,778.2 ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ
ಅವಧಿಯಲ್ಲಿ 1,755.3‌ ಅಡಿ ನೀರಿತ್ತು. ಕಾರ್ಗಲ್ ಸುತ್ತಲೂ ಮಳೆ ಆಗುತ್ತಿರುವುದರಿಂದ ಜೋಗ ಜಲಪಾತದ ಚೆಲುವು ಇಮ್ಮಡಿಗೊಂಡಿದೆ. 

ಹಲವೆಡೆ ಗುಡ್ಡ ಕುಸಿತ (ಕಾರವಾರ ವರದಿ): ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿದಿದೆ, ಮನೆ
ಗಳಿಗೆ ನೀರು ನುಗ್ಗಿದೆ. ಕಾಳಿನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು ಸೂಪಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ41 ಸಾವಿರ ಕ್ಯುಸೆಕ್‍ಗೆ ಏರಿಕೆಯಾಗಿದೆ. ಕೊಡಸಳ್ಳಿ ಮತ್ತು ಕದ್ರಾ ಜಲಾಶಯ
ದಿಂದ ತಲಾ 10 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗಿದೆ.

ಹೊನ್ನಾವರ ತಾಲ್ಲೂಕಿನ ಖರ್ವಾ ಸಮೀಪ ಹೊನ್ನಾವರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–69ರಲ್ಲಿ
ಭೂಕುಸಿತವಾಗಿದೆ. ಜೊಯಿಡಾ ತಾಲ್ಲೂಕಿನ ನುಜ್ಜಿ ಬಳಿ ಬೃಹದಾಕಾರ ಮರವೊಂದು ರಾಜ್ಯ ಹೆದ್ದಾರಿ–34ರಲ್ಲಿ ರಸ್ತೆಗೆ ಉರುಳಿತ್ತು. ಕಾರವಾರ–ಕೈಗಾ ರಸ್ತೆಯ ಮಂದ್ರಾಳಿಯಲ್ಲಿ ಭೂಕುಸಿತದಿಂದ ಕೆಲ ಗಂಟೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಮಡಿಕೇರಿ ವರದಿ: ನಗರದಲ್ಲಿ ಭಾನುವಾರ ತಡರಾತ್ರಿ ಬಿರುಗಾಳಿಯು ಜನರ ನಿದ್ದೆ ಕಸಿಯಿತು. ರಾತ್ರಿಯಿಡೀ ಮಳೆ ಸುರಿಯಿತು. ಬೆಳಿಗ್ಗೆ ಹೊತ್ತಿಗೆ ಹಾರಂಗಿ ಜಲಾಶಯಕ್ಕೆ ಅಧಿಕ ನೀರು ಹರಿದು ಬಂದು, ನದಿಗೆ 20 ಸಾವಿರ ಕ್ಯುಸೆಕ್‌ ನೀರು ಹರಿಸಲಾಯಿತು.

ಕುಶಾಲನಗರ ತಾಲ್ಲೂಕಿನ ಕಣಿವೆ ರಾಮಲಿಂಗೇಶ್ವರ ದೇಗುಲದ ಸಮೀಪ ಹಾರಂಗಿ ಹಾಗೂ ಕಾವೇರಿ
ನದಿ ಸಂಗಮಗೊಂಡು ಹರಿಯುತ್ತಿದ್ದು, ನೀರಿನ ಮಟ್ಟ ಹೆಚ್ಚಿದೆ. ಕಣಿವೆಯ ತೂಗು ಸೇತುವೆಯ ಬಳಿ ಕಾವೇರಿ ನದಿ ನೀರಿನ ಹರಿವು ಏರಿಕೆಯಾಗುತ್ತಿದೆ. ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು,ಇಲ್ಲಿನ ಸೋಪಾನಕಟ್ಟೆ ಮುಳುಗಡೆಯಾಗಿದೆ.

ಕುಶಾಲನಗರ ಸಮೀಪದ ಹಾರಂಗಿ‌ ಜಲಾಶಯದಿಂದ ಸೋಮವಾರ 20 ಸಾವಿರ ಕ್ಯುಸೆಕ್‌ ನೀರನ್ನು ‌ನದಿಗೆ ಹರಿಬಿಡಲಾಯಿತು. ನೀರು ಹೊರಬಂದಾಗ ಕಂಡ ಮನಮೋಹಕ ದೃಶ್ಯ

ಹಾರಂಗಿಯ ಕೆಳಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ
ಸಂಚಾರ ಬಂದ್ ಆಗಿದೆ. ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಕಪಿಲಾ ನದಿ ಪ್ರವಾಹದಿಂದಾಗಿ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟದ ಹದಿನಾರುಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ

ಹೇಮಾವತಿ ಜಲಾಶಯ ಭರ್ತಿಗೆ 18 ಅಡಿ ಬಾಕಿ ಇದೆ.

ಸೇತುವೆ ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಸುರಿದ ಮಳೆಯಿಂದ 5 ದಿನಗಳಿಂದ ಇಳಿಮುಖವಾಗಿದ್ದ ಕೃಷ್ಣಾ ಹಾಗೂ ಉಪನದಿಗಳಲ್ಲಿ ನೀರು ಹರಿಯುವ ಪ್ರಮಾಣ ಮತ್ತೆ ಹೆಚ್ಚಳವಾಗಿದೆ.

ಮಹಾರಾಷ್ಟ್ರದ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದ ಕೊಯ್ನಾದಲ್ಲಿ 18.7 ಸೆಂ.ಮೀ, ವಾರಣಾದಲ್ಲಿ 13.2 ಸೆಂ.ಮೀ, ಕಾಳಮ್ಮವಾಡಿಯಲ್ಲಿ 3.9 ಸೆಂ.ಮೀ, ಮಹಾಬಳೇಶ್ವರದಲ್ಲಿ 9.9 ಸೆಂ.ಮೀ, ನವಜಾದಲ್ಲಿ 27.4 ಸೆಂ.ಮೀ, ರಾಧಾನಗರಿಯಲ್ಲಿ 7.8 ಸೆಂ.ಮೀ. ಸಾಂಗಲಿಯಲ್ಲಿ 0.7 ಸೆಂ.ಮೀ, ಕೊಲ್ಹಾಪುರದಲ್ಲಿ 2.4 ಸೆಂ.ಮೀ ಮಳೆ ಆಗಿದೆ. ಚಿಕ್ಕೋಡಿ ಉಪ ವಿಭಾಗದಲ್ಲೂ ಮಳೆಯಾಗಿದ್ದು  ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಲ್ಲಿ ನೀರು ಹೆಚ್ಚಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜ್ ನಲ್ಲಿ 37,250 ಕ್ಯುಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿಯಲ್ಲಿ ದೂಧಗಂಗಾ ನದಿಗೆ 10,560 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರು ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 47,810 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ದೂಧಗಂಗಾ ನದಿಗೆ ಅಡ್ಡಲಾಗಿರುವ ತಾಲ್ಲೂಕಿನ ಮಲಿಕವಾಡ-ದತ್ತವಾಡ ಸೇತುವೆ ಮತ್ತೇ ಸೋಮವಾರ ಜಲಾವೃತಗೊಂಡು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.