ADVERTISEMENT

ಶಿವಮೊಗ್ಗದಲ್ಲಿ ವರುಣನ ಆರ್ಭಟ: ಕರಾವಳಿಯಲ್ಲಿ ಕ್ಷೀಣ, ಉಳಿದೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 18:21 IST
Last Updated 23 ಜುಲೈ 2020, 18:21 IST
ಯಾದಗಿರಿ ಜಿಲ್ಲೆಯ ಕಿಲ್ಲನಕೇರಾ ಗ್ರಾಮದ ಕೆರೆ ತುಂಬಿ ನೀರು ಹರಿಯುತ್ತಿರುವುದು
ಯಾದಗಿರಿ ಜಿಲ್ಲೆಯ ಕಿಲ್ಲನಕೇರಾ ಗ್ರಾಮದ ಕೆರೆ ತುಂಬಿ ನೀರು ಹರಿಯುತ್ತಿರುವುದು   

ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ವರುಣನ ಆರ್ಭಟ ಜೋರಾಗಿದ್ದು, ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾಜ್ಯದ ಉಳಿದ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ.

ಶಿವಮೊಗ್ಗ ನಗರ ಸುತ್ತಮುತ್ತ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಕೋಣಂದೂರು, ಹೊಸನಗರ, ರಿಪ್ಪನ್‌ಪೇಟೆ, ಸಾಗರ, ಭದ್ರಾವತಿಯಲ್ಲಿ ರಭಸವಾಗಿ ಮಳೆ ಸುರಿದಿದೆ.

ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಗುಡಿಸಲುಗಳಿಗೆ ನೀರು ನುಗ್ಗಿದೆ. ಕೆಲವು ಗ್ರಾಮಗಳಲ್ಲಿ ಮನೆ ಗೋಡೆಗಳು ಕುಸಿದಿವೆ.

ADVERTISEMENT

ಕೊಡಗು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಮಡಿಕೇರಿ ಹಾಗೂ ಸುಂಟಿಕೊಪ್ಪದಲ್ಲಿ ತುಸು ಹೊತ್ತು ಬಿರುಸಿನ ಮಳೆಯಾಗಿದೆ. ಮೈಸೂರು ಜಿಲ್ಲೆಯ ತಲಕಾಡು ಹೋಬಳಿ ವ್ಯಾಪ್ತಿಯಲ್ಲಿ ಎರಡು ತಾಸು ಧಾರಾಕಾರ ಮಳೆಯಾಗಿದೆ. ಹುಣಸೂರು ತಾಲ್ಲೂಕಿನ ಹಲವೆಡೆ ಹೆಚ್ಚು ಮಳೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಬುಧವಾರ ತಡರಾತ್ರಿ ಕೆಲ ಹೊತ್ತು ಸಾಧಾರಣ ಮಳೆ ಸುರಿಯಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ಭಾಗದಲ್ಲಿ ಬಿರುಸಾಗಿ ಸುರಿದಿದೆ. ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ಮೀನುಗಾರರಿಗೆ ಎಚ್ಚರಿಕೆ: ರಾಜ್ಯದ ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 3.3 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಇದೇ 24 ಮತ್ತು 25ರಂದು ಮೀನುಗಾರರು ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಸಿಡಿಲು ಬಡಿದು ರೈತ ಸಾವು

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಜಾನಕಲ್ಲು ಗ್ರಾಮದಲ್ಲಿ ಗುರುವಾರ ಸಿಡಿಲು ಬಡಿದು ರೈತ ಮಹಾಲಿಂಗಪ್ಪ (45) ಮೃತಪಟ್ಟಿದ್ದಾರೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಬಂದಿದ್ದು ಮರದ ಕೆಳಗೆ ನಿಂತಿದ್ದಾಗ ಈ ಅವಘಡ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.