ADVERTISEMENT

7 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಮುಂದುವರಿಕೆ: ನ.13ರ ನಂತರ ತಗ್ಗುವ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:31 IST
Last Updated 12 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕರಾವಳಿಗಳಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಬಲತೆ ತಗ್ಗಿರುವುದರಿಂದ ರಾಜ್ಯದಲ್ಲಿ ನ.13ರಿಂದ ಮಳೆ ತಗ್ಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ನ.15ರವರೆಗೆ ‘ಯೆಲ್ಲೊ ಅಲರ್ಟ್‌’ ಮುಂದುವರಿಸಲಾಗಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳು ಮಳೆಯಾಗುವ ಸೂಚನೆಗಳಿಲ್ಲ. ಆದರೆ, ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಬಹುದು.

ADVERTISEMENT

‘ನೆರೆಯ ರಾಜ್ಯಗಳಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ದಟ್ಟವಾದ ಮೋಡ ಕವಿದು, ಜಿಟಿಜಿಟಿ ಮಳೆಯಾಗಿತ್ತು. ಶೀತ ಗಾಳಿ ಬೀಸುತ್ತಿರುವುದರಿಂದ ಥರಗುಟ್ಟುವ ಚಳಿಯ ವಾತಾವರಣವಿದೆ. ಶನಿವಾರದಿಂದ ಮಳೆ ತಗ್ಗುವ ಸಾಧ್ಯತೆ ಇರುವುದರಿಂದ ವಾತಾವರಣದಲ್ಲಿ ಬದಲಾವಣೆಯ ನಿರೀಕ್ಷೆಯಿದೆ’ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ವಿವರಿಸಿದರು.

ಮಳೆ–ಎಲ್ಲಿ, ಎಷ್ಟು?: ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಶುಕ್ರವಾರ 8 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಚಾಮರಾಜನಗರ 6, ಕೊಳ್ಳೇಗಾಲ 5, ನಂಜನಗೂಡು, ಮಧುಗಿರಿ 4, ಮುಳಬಾಗಿಲು, ಮಂಡ್ಯ, ಮದ್ದೂರು, ಮಳವಳ್ಳಿ, ಚನ್ನಪಟ್ಟಣ, ಶಿರಾ, ಚಿಂತಾಮಣಿ, ಗೌರಿಬಿದನೂರು, ಆನೇಕಲ್ 3, ತುಮಕೂರು, ಪಾವಗಡ, ಕುಣಿಗಲ್, ತಿಪಟೂರು, ತೊಂಡೆಬಾವಿ, ಮೈಸೂರು, ರಾಮನಗರ, ಕನಕಪುರ, ಬಂಗಾರಪೇಟೆ, ಹೊಸಕೋಟೆ, ಪಾಂಡವಪುರ 2, ದೊಡ್ಡಬಳ್ಳಾಪುರ, ನೆಲಮಂಗಲ, ಗುಬ್ಬಿ, ಶ್ರೀರಂಗಪಟ್ಟಣ, ಮಾಗಡಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಮಾಲೂರು, ಸಕಲೇಶಪುರ ಹಾಗೂ ಕಂಪ್ಲಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಬೀದರ್‌ ಹಾಗೂ ಚಿತ್ರದುರ್ಗದಲ್ಲಿ ತಲಾ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.