ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಮಳೆ

ರೈತರ ಮೊಗದಲ್ಲಿ ಹರ್ಷ | ಬಿತ್ತನೆ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 20:04 IST
Last Updated 18 ಜುಲೈ 2023, 20:04 IST
ಕಲಬುರಗಿಯ ವೀರಮ್ಮ ಗಂಗಾಸಿರಿ ಮಹಿಳಾ ಕಾಲೇಜು ಬಳಿ ಮಂಗಳವಾರ ಮಳೆಯನ್ನು ಸಂಭ್ರಮಿಸಿದ ವಿದ್ಯಾರ್ಥಿನಿಯರು–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್
ಕಲಬುರಗಿಯ ವೀರಮ್ಮ ಗಂಗಾಸಿರಿ ಮಹಿಳಾ ಕಾಲೇಜು ಬಳಿ ಮಂಗಳವಾರ ಮಳೆಯನ್ನು ಸಂಭ್ರಮಿಸಿದ ವಿದ್ಯಾರ್ಥಿನಿಯರು–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್   

ಬೆಂಗಳೂರು: ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. 

ಮಳೆ ನಿರೀಕ್ಷೆಯಲ್ಲಿದ್ದ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. 

ಕಲಬುರಗಿ ನಗರ, ಆಳಂದ, ಚಿಂಚೋಳಿ, ಕಾಳಗಿ, ಜೇವರ್ಗಿ, ಯಡ್ರಾಮಿ ಹಾಗೂ ಚಿತ್ತಾಪುರ ತಾಲ್ಲೂಕುಗಳಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯಿತು. ಬೀದರ್ ಜಿಲ್ಲೆಯಲ್ಲಿ ಸತತ ಮಳೆಗೆ ಮೂರು ಮನೆಗಳ ಗೋಡೆ ಕುಸಿದು ಬಿದ್ದಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ADVERTISEMENT

ಬೀದರ್‌ ತಾಲ್ಲೂಕಿನ ಯರನಳ್ಳಿ, ಔರಾದ್‌ ತಾಲ್ಲೂಕಿನ ವಡಗಾಂವ ಹಾಗೂ ಬೋರಾಳ ಗ್ರಾಮದಲ್ಲಿ ತಲಾ ಒಂದು ಮನೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ.

ಮಹಾಡೋಣಗಾಂವ ಬಳಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹೊಲಗಳಿಗೆ ನುಗ್ಗಿದೆ. ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗಿದೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ.

(ಹುಬ್ಬಳ್ಳಿ ವರದಿ): ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಹದವಾದ ಮಳೆಯಾದರೆ, ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ, ಉಪ್ಪಿನಬೆಟಗೇರಿ, ಅಳ್ನಾವರ, ಕುಂದಗೋಳ ಭಾಗದಲ್ಲಿ ಮಳೆಯಾಯಿತು. ಗದಗ ಜಿಲ್ಲೆಯ ಹಲವೆಡೆ ಬಿಟ್ಟೂ ಬಿಡದೇ ಜಿಟಿಜಿಟಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ, ಬೆಳಗಾವಿ ನಗರ ಹಾಗೂ ವಿವಿಧ ತಾಲ್ಲೂಕುಗಳಲ್ಲಿ ಹಲವೆಡೆ ಉತ್ತಮ ಮಳೆ ಸುರಿಯಿತು. 

ಒಳಹರಿವು ಏರಿಕೆ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಜಿಲ್ಲೆಯಲ್ಲಿ ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಿದೆ. ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ 5,044 ಕ್ಯುಸೆಕ್‌ನಿಂದ 8,997 ಕ್ಯುಸೆಕ್‌ಗೆ ಏರಿಕೆಯಾಗಿದೆ. 

(ದಾವಣಗೆರೆ ವರದಿ):  ನಗರವೂ ಸೇರಿದಂತೆ ಜಿಲ್ಲೆಯ ಕೆಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ನಗರದಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾದರೆ, ಹರಿಹರ, ಚನ್ನಗಿರಿ, ಮಲೇಬೆನ್ನೂರು ಭಾಗದಲ್ಲಿ ಜಿಟಿಜಿಟಿ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.