ADVERTISEMENT

ಕರಾವಳಿಯಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಳೆಯಲ್ಲಿ ಪ್ರಯಾಣಿಕರು ಬಸ್ ಇಳಿದು ಸಾಗಿದರು
ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಳೆಯಲ್ಲಿ ಪ್ರಯಾಣಿಕರು ಬಸ್ ಇಳಿದು ಸಾಗಿದರು   

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಆಗಾಗ ಮಳೆ ಬರುತ್ತಿದ್ದು, ಮುಂಗಾರು ಇನ್ನೂ ಚುರುಕಾಗಿಲ್ಲ.

ದಕ್ಷಿಣ ಕನ್ನಡ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಪುತ್ತೂರು, ಸುಳ್ಯ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಭತ್ತದ ಬಿತ್ತನೆಗೆ ಅಗತ್ಯವಾದ ಮಳೆ ಇನ್ನೂ ಬೀಳದೇ ಇರುವುದರಿಂದ ರೈತರು ಆತಂಕ ಎದುರಿಸುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ. ಮಳೆ ಸುರಿದಿದೆ.

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳ ತಾಲ್ಲೂಕಿನಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಸುರಿಯಿತು.

ADVERTISEMENT

ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ತುಂತುರು ಮಳೆ, ಗಾಳಿ, ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮಳೆ, ಅರ್ಧಗಂಟೆ ಸುರಿಯಿತು. ವರುಣನ ಕೃಪೆಯಿಂದಾಗಿ ಮಲೆನಾಡು ಭಾಗದಲ್ಲಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಗಿರಿಶ್ರೇಣಿ, ಅತ್ತಿಗುಂಡಿ, ವಸ್ತಾರೆ ಭಾಗದಲ್ಲೂ ಮಳೆಯಾಗಿದೆ.

ಮೂಡಿಗೆರೆ ತಾಲ್ಲೂಕಿನಾದ್ಯಂತ ಗುರುವಾರ ಮಳೆ ಚುರುಕುಗೊಂಡಿದೆ. ಬೆಳಿಗ್ಗೆ ಬಿಸಿಲಿನ ವಾತಾವರಣವಿದ್ದು, ಬಳಿಕ ಇಡೀ ದಿನ ಬಿಟ್ಟು ಬಿಟ್ಟು ಮಳೆ ಸುರಿಯಿತು. ಕೊಪ್ಪ, ಕಳಸದಲ್ಲಿ ಉತ್ತಮವಾಗಿ ಮಳೆಯಾಗಿದೆ. ಕಡೂರಿನಲ್ಲಿ ತುಂತುರು ಮಳೆ ಸುರಿದಿದೆ.

ಶಿವಮೊಗ್ಗದಲ್ಲಿ ಸಾಧಾರಣ ಮಳೆ

ಜಿಲ್ಲೆಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ.ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ ಬಿಡುವು ನೀಡಿ ಸಾಧಾರಣ ಮಳೆಯಾಗಿದೆ. ಸಾಗರ, ಹೊಸನಗರ, ಸೊರಬ, ಶಿಕಾರಿ‍‍ಪುರ, ಭದ್ರಾವತಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ನಗರದಲ್ಲಿ ತುಂತುರು ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಮಧ್ಯಾಹ್ನ ಕೆಲ ಕಾಲ ತುಂತುರು ಮಳೆಯಾಯಿತು. ಮಲೇಬೆನ್ನೂರು ಸುತ್ತ ತುಂತುರು ಮಳೆಯಾಗಿದೆ.

ಕಾಫಿನಾಡಿನಲ್ಲಿ ಸಾಧಾರಣ ಮಳೆ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮೂರ್ನಾಲ್ಕು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಗುರುವಾರವೂ ಮುಂದುವರಿದಿದೆ.

ನಗರದಲ್ಲಿ ಬೆಳಿಗ್ಗೆಯಿಂದಲೂ ತುಂತುರು ಮಳೆ, ಗಾಳಿ, ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 12ಕ್ಕೆ ಮಳೆ ಆರಂಭವಾಗಿ, ಅರ್ಧಗಂಟೆ ಸುರಿಯಿತು. ವರುಣನ ಕೃಪೆಯಿಂದಾಗಿ ಮಲೆನಾಡು ಭಾಗದಲ್ಲಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಗಿರಿಶ್ರೇಣಿ, ಅತ್ತಿಗುಂಡಿ, ವಸ್ತಾರೆ ಭಾಗದಲ್ಲೂ ಮಳೆಯಾಗಿದೆ.

ಮೂಡಿಗೆರೆ ತಾಲ್ಲೂಕಿನಾದ್ಯಂತ ಗುರುವಾರ ಮಳೆ ಚುರುಕುಗೊಂಡಿದೆ. ಬೆಳಿಗ್ಗೆ ಬಿಸಿಲು ಕಾಣಿಸಿಕೊಂಡಿದ್ದು, ಬಳಿಕ ಮೋಡಕವಿದು ಇಡೀ ದಿನ ಬಿಟ್ಟು ಬಿಟ್ಟು ಮಳೆಯಾಯಿತು. ಕೊಪ್ಪ, ಕಳಸದಲ್ಲಿ ಉತ್ತಮವಾಗಿ ಮಳೆಯಾಗಿದೆ. ಕಡೂರಿನಲ್ಲಿ ತುಂತುರು ಮಳೆ ಸುರಿದಿದೆ.

ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಗುರುವಾರ ಮಳೆಯಾಗಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತದ ಪ್ರಕರಣಗಳು ವರದಿಯಾಗಿವೆ.

ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಲ್ಲಿ ಚರಂಡಿಗಳು ಉಕ್ಕಿ ಹರಿದು ರಸ್ತೆಗಳು, ಖಾಲಿ ನಿವೇಶನಗಳು ಕೆರೆಯಂತಾದವು. ಹೊನ್ನಾವರದಲಕ್ಷ್ಮಣತೀರ್ಥದಲ್ಲಿ ಭವಾನಿ ಕನ್ಯಾ ಮೇಸ್ತ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಕುಮಟಾ, ಭಟ್ಕಳ, ಜೊಯಿಡಾ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಧಾರವಾಡದಲ್ಲಿ ಜಿಟಿಜಿಟಿ ಮಳೆ, ಹುಬ್ಬಳ್ಳಿಯಲ್ಲಿ ತುಂತುರು ಮಳೆ ಸುರಿಯಿತು.

ಕೊಡಗಿನಲ್ಲಿ ಸಾಧಾರಣ ಮಳೆ

ಕೊಡಗು ಜಿಲ್ಲೆಯ ಅಲ್ಲಲ್ಲಿ ಗುರುವಾರ ಮಧ್ಯಾಹ್ನದ ಬಳಿಕ ಬಿಡುವು ಕೊಟ್ಟು ಸಾಧಾರಣ ಮಳೆಯಾಗಿದೆ. ಮಡಿಕೇರಿ, ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಸುರಿದಿದೆ. ಮೈಸೂರು, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.