ADVERTISEMENT

ಮಳೆ ಆರ್ಭಟ: ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು

95 ಮನೆಗಳಿಗೆ ಹಾನಿ * ಜಮೀನು, ವಸತಿಪ್ರದೇಶಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 16:17 IST
Last Updated 14 ಅಕ್ಟೋಬರ್ 2022, 16:17 IST

ಬೆಂಗಳೂರು: ರಾಜ್ಯದ ವಿಜಯನಗರ, ಧಾರವಾಡ, ವಿಜಯಪುರ,ಕಲಬುರಗಿ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಜಮೀನುಗಳಿಗೆ, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆ, ಸೇತುವೆಗಳು ಮುಳುಗಿವೆ.

ಗೌರಿಬಿದನೂರು ತಾಲ್ಲೂಕಿನ ದಿನ್ನೆಹುಣಸೇನಹಳ್ಳಿ ಬಳಿಯ ಮೇಳ್ಯ ಕೆರೆ ಕೋಡಿ ನೀರಿನಲ್ಲಿ ಮಂಜುನಾಥ್ (38) ಎಂಬ ಯುವಕ ಗುರುವಾರ ಕೊಚ್ಚಿ ಹೋಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಮಂಡ್ಯ ತಾಲ್ಲೂಕಿನ ಹೊಡಾಘಟ್ಟ ಕೆರೆ ತುಂಬಿ ಕೋಡಿ ಹರಿದಿದ್ದು, ಶಿವಾರ ಗ್ರಾಮದ ಪುಟ್ಟಸ್ವಾಮಿ (65) ಎಂಬುವವರು ನೀರಿನಲ್ಲಿ ಶುಕ್ರವಾರ ಕೊಚ್ಚಿ ಹೋಗಿದ್ದಾರೆ.

ADVERTISEMENT

ಗುರುವಾರ ರಾತ್ರಿ ಸುರಿದ ಮಳೆಗೆ ವಿಜಯನಗರ ಜಿಲ್ಲೆಯಲ್ಲಿ 61 ಮನೆಗಳು, 70 ಹೆಕ್ಟೇರ್ ಶೇಂಗಾ, ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 34 ಮನೆಗಳಿಗೆ ಹಾನಿಯಾಗಿದೆ. ಚಾಮರಾಜನಗರದ 15ನೇ ವಾರ್ಡ್‌ನ ಸೋಮಣ್ಣ ಲೇಔಟ್‌ನಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದರಿಂದ, ನಿವಾಸಿಗಳು ಜಿಲ್ಲಾಡಳಿತದ ಭವನದ ಮುಂದೆ ಪ್ರತಿಭಟಿಸಿದರು.

ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ 46 ಸೆಂ.ಮೀ, ತ್ಯಾಗದಬಾಗಿಯಲ್ಲಿ 45 ಸೆಂ.ಮೀ, ತಣಗೆಬೈಲಿನಲ್ಲಿ 35 ಸೆಂ.ಮೀ, ಲಕ್ಕವಳ್ಳಿಯಲ್ಲಿ 44 ಸೆಂ.ಮೀ ಮಳೆ ದಾಖಲಾಗಿದೆ. ಬೀದರ್‌ ತಾಲ್ಲೂಕಿನ ಚಾಂಬೋಳದಲ್ಲಿ 12 ಸೆಂ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.