ADVERTISEMENT

ತೌತೆ ಚಂಡಮಾರುತ: ಕರ್ನಾಟಕದ ಈ ಭಾಗಗಳಲ್ಲಿ ಬುಧವಾರದ ವರೆಗೆ ‘ಯೆಲ್ಲೊ ಅಲರ್ಟ್‌’!

​ಪ್ರಜಾವಾಣಿ ವಾರ್ತೆ
Published 18 ಮೇ 2021, 2:53 IST
Last Updated 18 ಮೇ 2021, 2:53 IST
ಗುಜರಾತ್‌ನ ವೆರವಾಲ್‌ನ ಸಮುದ್ರ ತೀರದಲ್ಲಿ ಎನ್‌ಡಿಆರ್‌ಎಫ್‌ನ ಸದಸ್ಯರೊಬ್ಬರು ಧ್ವನಿವರ್ಧಕ ಬಳಸಿ ಮೀನುಗಾರರಿಗೆ ಚಂಡಮಾರುತದ ಬಗ್ಗೆ ಮಾಹಿತಿ ನೀಡುತ್ತಿರುವುದು  (ರಾಯಿಟರ್ಸ್‌)
ಗುಜರಾತ್‌ನ ವೆರವಾಲ್‌ನ ಸಮುದ್ರ ತೀರದಲ್ಲಿ ಎನ್‌ಡಿಆರ್‌ಎಫ್‌ನ ಸದಸ್ಯರೊಬ್ಬರು ಧ್ವನಿವರ್ಧಕ ಬಳಸಿ ಮೀನುಗಾರರಿಗೆ ಚಂಡಮಾರುತದ ಬಗ್ಗೆ ಮಾಹಿತಿ ನೀಡುತ್ತಿರುವುದು (ರಾಯಿಟರ್ಸ್‌)   

ಬೆಂಗಳೂರು: ತೌತೆ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೇ 19ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದಲ್ಲಿ ಚಂಡಮಾರುತದ ಅಬ್ಬರ ತುಸು ಕಡಿಮೆಯಾಗಿದೆ. ಆದರೂ, ಮುಂದಿನ ಎರಡು ದಿನ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರದವರೆಗೆ ‘ಯೆಲ್ಲೊ ಅಲರ್ಟ್‌’ ಮುಂದುವರಿಸಲಾಗಿದೆ.

ಉಳಿದ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದು, ಗುಡುಗು ಮತ್ತು ಸಿಡಿಲು ಹೆಚ್ಚಾಗಿ ಇರಲಿದೆ. ಕೆಲವು ಜಿಲ್ಲೆಗಳಲ್ಲಿ ಮೇ 22ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆಎಂದೂ ಮಾಹಿತಿ ನೀಡಿದೆ.

ADVERTISEMENT

ಮೀನುಗಾರರಿಗೆ ಎಚ್ಚರಿಕೆ

ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಗರಿಷ್ಠ 5.0 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿವೆ. ವೇಗವಾದ ಗಾಳಿಯೂ ಬೀಸುತ್ತಿರುವುದರಿಂದ ಮೀನುಗಾರರು ಮೇ 19ರವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಮಳೆ–ಎಲ್ಲಿ, ಎಷ್ಟು?

ಉತ್ತರ ಕನ್ನಡ ಜಿಲ್ಲೆಯ ಕದ್ರಾ ಭಾಗದಲ್ಲಿ ಸೋಮವಾರ 11 ಸೆಂ.ಮೀ. ಗರಿಷ್ಠ ಮಳೆಯಾಗಿದೆ. ಹೊನ್ನಾವರ, ಕೊಲ್ಲೂರು 7, ಸಿದ್ದಾಪುರ 6, ಕಾರವಾರ, ಬೆಳಗಾವಿ, ಸೋಮವಾರಪೇಟೆ 5, ಕಾರ್ಕಳ, ನಿಪ್ಪಾಣಿ, ಸಂಕೇಶ್ವರ 4, ಅಂಕೋಲಾ, ಬೆಳ್ತಂಗಡಿ, ಭಾಗಮಂಡಲ 3, ಭಟ್ಕಳ, ಕುಂದಾಪುರ, ಹುಕ್ಕೇರಿ, ಧಾರವಾಡ, ಸಾಗರ, ಆಗುಂಬೆ, ಮಡಿಕೇರಿ 2, ಮೂಡುಬಿದರೆ, ಮಂಗಳೂರು, ಬೈಲಹೊಂಗಲ, ತೀರ್ಥಹಳ್ಳಿ, ಸೊರಬ, ಶೃಂಗೇರಿ, ಬಂಗಾರಪೇಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.