ADVERTISEMENT

ರಾಜಭವನ ರಸ್ತೆಯಲ್ಲಿ ಹಾರಾಡಿದ ‘ಕಮಲ’

ಪಾಸ್‌ ಇದ್ದರೂ ಸಿಗಲಿಲ್ಲ ಪ್ರವೇಶ l ಪೊಲೀಸರ ಜತೆ ವಾಗ್ವಾದ l ಬಿಜೆಪಿ ಕಾರ್ಯಕರ್ತರ ಜೈಕಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:41 IST
Last Updated 26 ಜುಲೈ 2019, 19:41 IST
ರಾಜಭವನ ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು – ಪ್ರಜಾವಾಣಿ ಚಿತ್ರ
ರಾಜಭವನ ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಆಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ರಾಜಭವನದ ಹೊರಗಡೆ ‘ಕಮಲ’ದ ಬಾವುಟಗಳು ಹಾರಾಡಿದವು. ಬಿಜೆಪಿ ಕಾರ್ಯಕರ್ತರು ಜೈಕಾರ ಕೂಗಿ ಸಂಭ್ರಮಿಸಿದರು.

ನಗರದ ವಿವಿಧ ವಾರ್ಡ್ ಹಾಗೂ ಹೊರ ಜಿಲ್ಲೆಗಳಿಂದ ಬಂದಿದ್ದ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು, ರಾಜಭವನ ರಸ್ತೆಯುದ್ದಕ್ಕೂ ಜಮಾಯಿಸಿದ್ದರು. ಯಡಿಯೂರಪ್ಪ ರಾಜಭವನದೊಳಗೆ ಹೋಗುವಾಗ ಹಾಗೂ ಹೊರಗೆ ಬರುವಾಗ ಕಾರ್ಯಕರ್ತರು ಪಕ್ಷ, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಪರ ಘೋಷಣೆ ಕೂಗಿದರು.

ಇಡೀ ರಸ್ತೆಯೇ ಬಿಜೆಪಿ ಕಾರ್ಯಕರ್ತರಿಂದ ತುಂಬಿತ್ತು. ಪೊಲೀಸರ ಭದ್ರತೆಯ ನಡುವೆಯೂ ಕೆಲ ಕಾರ್ಯಕರ್ತರು, ರಸ್ತೆಯಲ್ಲೇ ಬಾವುಟ ಹಿಡಿದು ನೃತ್ಯ ಮಾಡಿದರು. ಸಂಭ್ರಮದ ಕ್ಷಣವನ್ನು ಮೊಬೈಲ್ ಕ್ಯಾಮೆರಾದಲ್ಲೂ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರು.

ADVERTISEMENT

ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್ ಶಾ ಅವರ ಕಟೌಟ್‌ಗಳನ್ನು ಪ್ರದರ್ಶಿಸಿದರು. ನರೇಂದ್ರ ಮೋದಿ ವೇಷಭೂಷಣ ತೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ನೋಡುಗರ ಗಮನಸೆಳೆದರು. ಕೆಲವರು, ರಸ್ತೆಯಲ್ಲೇ ಹಾಕಲಾಗಿದ್ದ ಸ್ಕ್ರೀನ್‌ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದರು.

ರಾಜಭವನ ಗೇಟ್‌ ಬಳಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಅವರನ್ನು ನಿಯಂತ್ರಿಸಲು ಪ್ರಯತ್ನಿಸಿ ಪೊಲೀಸರು ಹೈರಾಣಾದರು. ಕೆಲವರು, ರಾಜಭವನದೊಳಗೆ ಹೋಗಲು ಯತ್ನಿಸಿದರು. ಬ್ಯಾರಿಕೇಡ್ ಹಾಗೂ ಹಗ್ಗದಿಂದ ಮಾನವ ಸರಪಳಿ ನಿರ್ಮಿಸಿದ ಪೊಲೀಸರು, ಕಾರ್ಯಕರ್ತರನ್ನು ಚದುರಿಸಿದರು. ಅದೇ ವೇಳೆ ನೂಕುನುಗ್ಗಲು ಸಹ ಉಂಟಾಯಿತು.

ಪಾಸ್‌ ಇದ್ದರೂ ಸಿಗಲಿಲ್ಲ ಪ್ರವೇಶ: ರಾಜಭವನದಲ್ಲಿ ನಿಗದಿಗಿಂತ ಹೆಚ್ಚು ಜನರು ಸೇರಿದ್ದರಿಂದ, ಹೆಚ್ಚುವರಿ ಜನರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಪಾಸ್ ಹಿಡಿದು ಗೇಟ್‌ ಬಳಿ ಬಂದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದರು.

ಅದೇ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ‘ಪಾಸ್ ಇದ್ದರೂ ಏಕೆ ಒಳಗೆ ಬಿಡುತ್ತಿಲ್ಲ’ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ‘ನಿಗದಿಗಿಂತ ಹೆಚ್ಚು ಜನರು ಒಳಗಿದ್ದಾರೆ’ ಎಂದು ಪೊಲೀಸರು ಉತ್ತರಿಸಿದರು. ಮುಖಂಡರೇ, ಕಾರ್ಯಕರ್ತರನ್ನು ಸಮಾಧಾನಪಡಿಸಿ ಸ್ಥಳದಿಂದ ಕರೆದೊಯ್ದರು.

ಪೊಲೀಸರ ಜತೆ ಮಹಿಳೆ ಜಟಾಪಟಿ

ಪಾಸ್ ಇದ್ದರೂ ರಾಜಭವನದೊಳಗೆ ಹೋಗಲು ಅವಕಾಶ ನೀಡದ ವಿಚಾರವಾಗಿ ಮಹಿಳೆ ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಮಹಿಳೆ, ಪಾಸ್‌ ತೋರಿಸಿ ಒಳಗೆ ಹೊರಟಿದ್ದರು. ಅದೇ ವೇಳೆ ಪೊಲೀಸರು ತಡೆದಿದ್ದರು. ಕೋಪಗೊಂಡ ಮಹಿಳೆ, ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿದ್ದರು.

ಅದನ್ನು ಪ್ರಶ್ನಿಸಿದ ಮಹಿಳಾ ಕಾನ್‌ಸ್ಟೆಬಲ್‌ಗಳು, ಮಹಿಳೆಯನ್ನು ವಶಕ್ಕೆ ಪಡೆದು ಜೀಪಿಗೆ ಹತ್ತಿಸಿದ್ದರು. ತಮ್ಮನ್ನು ಕೆಳಗೆ ಇಳಿಸುವಂತೆ ಮಹಿಳೆ ಪಟ್ಟು ಹಿಡಿದರು. ಸ್ಥಳದಲ್ಲಿ ಜಮಾಯಿಸಿದ ಕಾರ್ಯಕರ್ತರು, ‘ಕಾರ್ಯಕ್ರಮ ವೀಕ್ಷಿಸಲು ಬಂದಿರುವ ಕಾರ್ಯಕರ್ತರ ಜೊತೆ ಈ ರೀತಿ ನಡೆದುಕೊಳ್ಳಬೇಡಿ’ ಎಂದು ಪೊಲೀಸರ ಕ್ರಮವನ್ನು ಪ್ರಶ್ನಿಸಿದರು. ಅದೇ ವೇಳೆ ಸ್ಥಳದಲ್ಲಿದ್ದ ಡಿಸಿಪಿ ರಾಹುಲ್ ಕುಮಾರ್ ಹಾಗೂ ಮಹಿಳೆ ನಡುವೆ ಮಾತಿನ ಚಕಮಕಿ ನಡೆಯಿತು. ಮುಖಂಡರೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಮಹಿಳೆಯನ್ನು ಸಮಾಧಾನ ಪಡಿಸಿದರು.

ಶಾಸಕರ ಪ್ರವೇಶಕ್ಕೂ ತಡೆ

ಕಾರ್ಯಕ್ರಮ ನಡೆಯುತ್ತಿದ್ದಾಗ ರಾಜಭವನದ ಗೇಟ್ ಬಂದ್ ಮಾಡಲಾಗಿತ್ತು. ಅದೇ ಸಂದರ್ಭದಲ್ಲೇ ಕಾರಿನಲ್ಲಿ ಗೇಟ್ ಬಳಿ ಬಂದ ಕೆಲ ಶಾಸಕರನ್ನು ರಾಜಭವನದ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಳ್ಳಾರಿ ನೋಂದಣಿ ಸಂಖ್ಯೆ ಕಾರಿನಲ್ಲಿ ಬಂದಿದ್ದ ಶಾಸಕರೊಬ್ಬರನ್ನು ಸಿಬ್ಬಂದಿ ಗೇಟ್‌ ಬಳಿಯೇ ತಡೆದರು. ‘ಕಾರ್ಯಕ್ರಮ ಶುರುವಾಗಿದ್ದು, ಕಾರನ್ನು ಒಳಗೆ ಬಿಡುವುದಿಲ್ಲ’ ಎಂದು ಹೇಳಿದರು. ಕೆಲ ನಿಮಿಷ ಗೇಟ್‌ ಬಳಿಯೇ ಶಾಸಕರ ಕಾರು ನಿಲ್ಲಿಸಲಾಗಿತ್ತು. ಕೋಪಗೊಂಡ ಶಾಸಕರು, ಕಾರಿನ ಬಾಗಿಲು ಬಳಿಯೇ ಎದ್ದು ನಿಂತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಶಾಸಕರೇ ನಡೆದುಕೊಂಡೇ ರಾಜಭವನದೊಳಗೆ ಹೋದರು.

ರಸ್ತೆ ಬಂದ್; ದಟ್ಟಣೆಯಲ್ಲಿ ಜನ

ವಿಧಾನಸೌಧಕ್ಕೆ ಹೊಂದಿಕೊಂಡೇ ಇರುವ ರಾಜಭವನದಲ್ಲಿ ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ಪೊಲೀಸರು, ರಾಜಭವನದೊಳಗೆ ಹಾಗೂ ಹೊರಗೆ ಬಿಗಿ ಭದ್ರತೆ ಕೈಗೊಂಡಿದ್ದರು. ಮೀಸೆ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸಂಜೆ 5ಗಂಟೆಯಿಂದಲೇ ವಾಹನಗಳ ಸಂಚಾರ ನಿರ್ಬಂಧಿಸಿದ್ದರು.

ಕಾರ್ಯಕ್ರಮಕ್ಕೆ ಬಂದಿದ್ದ ಜನಪ್ರತಿನಿಧಿಗಳು ಹಾಗೂ ಗಣ್ಯರ ವಾಹನಗಳಿಗಷ್ಟೇ ಈ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು.

ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ನೀಡದ ಕಾರಣ, ಸುತ್ತಮುತ್ತಲ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಕಂಡುಬಂತು. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮುಂಭಾಗದಿಂದ ಮೀಸೆ ತಿಮ್ಮಯ್ಯ ವೃತ್ತದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ರಸ್ತೆಯಲ್ಲಿ ಹೊರಟಿದ್ದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.