
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ‘ನಾಲಗೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಮಹಿಳೆ ಎಂದರೆ ಏನು ಗೌರವವೇ ಇಲ್ಲವೇ? ಎಂದು ಕಿಡಿ ಕಾರಿದೆ.
‘ನನ್ನ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಜಿ.ಅಮೃತಾ ಗೌಡ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿ.ವಿ.ರಾಜೀವ್ ಗೌಡ (46) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ರಾಜೀವ್ ಗೌಡ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ವಿವೇಕ್ ರೆಡ್ಡಿ ಅವರು, ‘ಶಿಡ್ಲಘಟ್ಟದ ವ್ಯಕ್ತಿಯೊಬ್ಬರು ‘ಕಲ್ಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಕಲಾವಿದನನ್ನು ಬೆಂಬಲಿಸಿ ಬ್ಯಾನರ್ ಮತ್ತು ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಇದಕ್ಕೆ ವಾಟ್ಸ್ ಆ್ಯಪ್ ಸಂದೇಶದ ಮೂಲಕ ಪೌರಾಯುಕ್ತರು ಅನುಮತಿಯನ್ನೂ ನೀಡಿದ್ದರು’ ಎಂದು ವಿವರಿಸಿದರು.
‘ಬ್ಯಾನರ್ ಅಳವಡಿಕೆಗೆ ಶುಲ್ಕವನ್ನೂ ಪಾವತಿಸಲಾಗಿತ್ತು. ಪೌರಾಯುಕ್ತರು ಏಕಾಏಕಿ ಬ್ಯಾನರ್‌ಗಳನ್ನು ತೆರವು ಮಾಡಿಸಿದ್ದರು. ಅದೇ ಸ್ಥಳಗಳಲ್ಲಿದ್ದ ಜೆಡಿಎಸ್ ಪಕ್ಷದ ಬ್ಯಾನರ್‌ಗಳನ್ನು ಹಾಗೇ ಬಿಡಲಾಗಿತ್ತು. ಹೀಗಾಗಿ, ರಾಜೀವ್ ಗೌಡ ಪೌರಾಯುಕ್ತರ ವಿರುದ್ಧ ಕೆಲವು ಪದಗಳನ್ನು ಬಳಸಿದ್ದಾರೆ. ಈ ವಿಷಯದಲ್ಲಿ ಅರ್ಜಿದಾರರು ಯಾವುದೇ ತೆರನಾದ ಕ್ರಿಮಿನಲ್ ಪದಗಳನ್ನು ಬಳಸಿಲ್ಲ. ರಾಜೀವ್ ಗೌಡ ಈಗಾಗಲೇ ಕ್ಷಮೆ ಕೋರಿದ್ದಾರೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ಬಹಿರಂಗವಾಗಿ ಕ್ಷಮೆ ಕೋರಲು ಸಿದ್ಧ’ ಎಂದರು.
ಇದಕ್ಕೆ ವ್ಯಗ್ರರಾದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ಕಟೌಟ್ ಹಾಕಲು ನೀವೇನು ನಟರಾ? ನಿರ್ಮಾಪಕರಾ? ಮಹಿಳಾ ಅಧಿಕಾರಿ ಬಗ್ಗೆ ಒಂದಿನಿತೂ ಗೌರವವೇ ಇಲ್ಲದಂತೆ ಬಾಯಿಗೆ ಬಂದಂತೆ ಮಾತನಾಡಿದ್ದೀರಲ್ಲಾ’ ಎಂದು ಕಿಡಿ ಕಾರಿದರು. ‘ನಿಮ್ಮ ಅರ್ಜಿದಾರರ ಪಕ್ಷವೇ ಆಡಳಿತ ನಡೆಸುತ್ತಿದೆಯಲ್ಲಾ, ಆದರೂ, ರಾಜೀವ್ ಗೌಡ ಎಲ್ಲಿ ಅಡಗಿ ಕುಳಿತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ವಿವೇಕ್ ರೆಡ್ಡಿ, ‘ಈಗಾಗಲೇ ರಾಜೀವ್ ಗೌಡ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ. ಪೊಲೀಸರು ಬಂಧಿಸಲು ಕಾದು ಕುಳಿತಿದ್ದಾರೆ. ರಕ್ಷಣೆ ಒದಗಿಸಿದರೆ ತನಿಖೆಗೆ ಸಹಕರಿಸುತ್ತಾರೆ’ ಎಂದರು. ಆದೇಶ ಕಾಯ್ದಿರಿಸಿದ ನ್ಯಾಯಪೀಠ ಬುಧವಾರ (ಜ.21) ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ನಾಲಗೆ ಸರಿಯಾಗಿರಬೇಕು. ಆಡಿದ ಮಾತುಗಳನ್ನು ಹಿಂಪಡೆಯಲಾಗದು. ಎಲ್ಲವನ್ನೂ ಯಾವಾಗಲೂ ನಾಲಗೆಯೇ ನಾಶ ಮಾಡಿದೆ. ನೀವು ಕ್ಷಮೆ ಕೋರಬಹುದು ಆದರೆ ಬಿರುಕು ಹಾಗೆ ಉಳಿಯಲಿದೆ ಎಂಬುದನ್ನು ನೆನಪಿಡಿನ್ಯಾ.ಎಂ.ನಾಗಪ್ರಸನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.