ADVERTISEMENT

ಆರೋಗ್ಯ ವಿ.ವಿ. ಹಗರಣಕ್ಕೆ ಎಳ್ಳುನೀರು

ಇಬ್ಬರು ಎಂಜಿನಿಯರ್‌ಗಳ ವಿರುದ್ಧದ ಇಲಾಖಾ ವಿಚಾರಣೆ ಮೇಲ್ಮನವಿ ಕೈಬಿಡಲು ‘ಮೈತ್ರಿ’ ತೀರ್ಮಾನ

ಮಂಜುನಾಥ್ ಹೆಬ್ಬಾರ್‌
Published 22 ಆಗಸ್ಟ್ 2019, 20:34 IST
Last Updated 22 ಆಗಸ್ಟ್ 2019, 20:34 IST
   

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಟ್ಟಡ (ಆರ್‌ಜಿಯುಎಚ್‌ಎಸ್) ನಿರ್ಮಾಣ ಕಾಮಗಾರಿಯ ₹33 ಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ತನ್ಮೂಲಕ ಈ ಪ್ರಕರಣಕ್ಕೆ ಎಳ್ಳುನೀರು ಬಿಟ್ಟಂತಾಗಿದೆ.

ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಕ್ಕೆ ಕೆಲವೇ ದಿನಗಳು ಇರುವಾಗ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಪ್ತ ಅಧಿಕಾರಿಗಳು ಎನ್ನಲಾದ ಕೆ.ಜೈಪ್ರಕಾಶ್‌ (ಮುಖ್ಯ ಎಂಜಿನಿಯರ್‌) ಹಾಗೂ ಬಿ.ಎಲ್‌.ರವೀಂದ್ರಬಾಬು (ಸೂಪರಿಂಟೆಂಡಿಂಗ್‌ ಎಂಜಿನಿಯರ್‌) ಅವರಿಗೆ ಅನುಕೂಲ ಮಾಡಿಕೊಡಲು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಮನಗರದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಜಮೀನು ಲಭ್ಯವಿಲ್ಲದೆ ಇದ್ದರೂ ಗುತ್ತಿಗೆದಾರರಾದ ಮೆಸರ್ಸ್‌ ನಾಗಾರ್ಜುನ ಕನ್‌ಸ್ಟ್ರಕ್ಷನ್‌ಗೆ ಕಾರ್ಯಾದೇಶವನ್ನು (2006–2007) ನೀಡಲಾಗಿತ್ತು. ಭಾರಿ ಪ್ರಮಾಣದ ಬಡ್ಡಿ ರಹಿತ ಮುಂಗಡವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗಿತ್ತು. ಈ ಅವಧಿಯಲ್ಲಿ ಜೈಪ್ರಕಾಶ್‌ ಅವರು ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ ವಿಭಾಗ) ಮುಖ್ಯ ಎಂಜಿನಿಯರ್‌ ಆಗಿದ್ದರು.

ADVERTISEMENT

‘ಈ ಲೋಪದೋಷಗಳಿಗೆ ಕಾರಣೀಭೂತರಾದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ. ಆಪಾದನೆಗಳು ಗಂಭೀರವಾಗಿದ್ದು, ಇದಕ್ಕೆ ಹೊಣೆಗಾರರಾಗಿರುವ ಕೆ.ಜೈಕಾಶ್‌ ಹಾಗೂ ಬಿ.ಎಲ್‌.ರವೀಂದ್ರಬಾಬು ಅವರನ್ನು ಅಮಾನತು ಮಾಡಬೇಕು. ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು 2008ರ ಜುಲೈ 9ರಂದು ಆದೇಶಿಸಿದ್ದರು. ಅಮಾನತನ್ನು ರದ್ದುಪಡಿಸಿ 2009ರ ಜುಲೈ 14ರಂದು ಆದೇಶ ಹೊರಡಿಸಲಾಗಿತ್ತು.

ಆದರೆ, ಇಲಾಖಾ ವಿಚಾರಣೆ ‍ಪ್ರಕ್ರಿಯೆ ಮುಂದುವರಿದಿತ್ತು. ಇದನ್ನು ಪ್ರಶ್ನಿಸಿ ಜೈಪ್ರಕಾಶ್‌ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ರದ್ದುಪಡಿಸಿ ಕೆಎಟಿ 2012ರ ಜನವರಿ 30ರಂದು ನಿರ್ದೇಶಿಸಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ 2013ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. 2019ರವರೆಗೂ ವಿಚಾರಣೆ ಮುಂದುವರಿದಿತ್ತು. ಈ ನಡುವೆ, ಇಲಾಖಾ ವಿಚಾರಣೆಯ ಮೇಲ್ಮನವಿ ಹಿಂಪಡೆಯಲು ತರಾತುರಿಯಲ್ಲಿ ನಿರ್ಧರಿಸಲಾಗಿದೆ.

ಜೈಪ್ರಕಾಶ್‌ ಅವರನ್ನು 2017ರ ಫೆಬ್ರುವರಿ 25ರಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಮೈತ್ರಿ ಸರ್ಕಾರದ ಬಂದ ಕೂಡಲೇ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹುದ್ದೆಯನ್ನೂ ಹೆಚ್ಚುವರಿಯಾಗಿ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಜೈಪ್ರಕಾಶ್ ಅವರನ್ನು ಆಗಸ್ಟ್‌ 1ರಂದು ಎರಡೂ ಹುದ್ದೆಗಳಿಂದ ಎತ್ತಂಗಡಿ ಮಾಡಲಾಗಿತ್ತು. ಇದರ ನಡುವೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಆಗಸ್ಟ್‌ 19ರಂದು ನೇಮಿಸಲಾಗಿದೆ.

ಈ ನಡುವೆ, ಸಚಿವ ಸಂಪುಟದ ಆದೇಶದ ಕಡತವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ತರಿಸಿಕೊಂಡಿದ್ದಾರೆ. ಹೈಕೋರ್ಟ್‌ಗೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಮತ್ತೆ ಕಾರ್ಯದರ್ಶಿ ಹುದ್ದೆಗೆ?
ಇತ್ತೀಚೆಗಷ್ಟೇ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದ ಲಕ್ಷ್ಮಣರಾವ್ ಪೇಶ್ವೆ ಅವರನ್ನು ಬದಲಿಸಿ, ಆ ಹುದ್ದೆಗೆ ಕೆ.ಜೈಪ್ರಕಾಶ್‌ ಅವರನ್ನು ತರಲು ಬಿಜೆ‍ಪಿ ಸರ್ಕಾರದಲ್ಲೂ ಪ್ರಯತ್ನಗಳು ನಡೆದಿವೆ. ಮುಖ್ಯಮಂತ್ರಿ ಸಚಿವಾಲಯದಲ್ಲಿ ಈ ಸಂಬಂಧ ಕಡತ ಸಿದ್ಧವಾಗಿದ್ದು, ಬಿ.ಎಸ್‌.ಯಡಿಯೂರಪ್ಪ ಸಹಿ ಹಾಕುವುದಷ್ಟೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.