ADVERTISEMENT

ರಾಜ್ಯಸಭೆ ಚುನಾವಣೆ | ಬಿಜೆಪಿ ಅಭ್ಯರ್ಥಿ ಅಶೋಕ ಗಸ್ತಿ ಬಳಿ ಚಿನ್ನಾಭರಣವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 23:30 IST
Last Updated 9 ಜೂನ್ 2020, 23:30 IST
ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾದ ಅಶೋಕ್‌ ಗಸ್ತಿ ನಾಮಪತ್ರ ಸಲ್ಲಿಸಿದರು. ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಲಕ್ಷಮಣ ಸವದಿ ಇದ್ದಾರೆ –ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾದ ಅಶೋಕ್‌ ಗಸ್ತಿ ನಾಮಪತ್ರ ಸಲ್ಲಿಸಿದರು. ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಲಕ್ಷಮಣ ಸವದಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಶೋಕ ಗಸ್ತಿ ಸ್ಥಿತಿವಂತರಲ್ಲ. ನಾಲ್ವರು ಅಭ್ಯರ್ಥಿಗಳ ಪೈಕಿ ಕನಿಷ್ಠ ಆಸ್ತಿ ಹೊಂದಿದವರಾಗಿದ್ದಾರೆ.

ಕುಟುಂಬದ ಒಟ್ಟು ಘೋಷಿತ ಆಸ್ತಿ ₹19.3 ಲಕ್ಷ. ಗಸ್ತಿಗಿಂತ ಅವರ ಪತ್ನಿ ಸುಮಾ ಗಸ್ತಿ ಸ್ಥಿತಿವಂತೆ. ಅಶೋಕ್ ಬಳಿ ಎರಡು ಹಳೆಯ ಬಜಾಜ್ ಸ್ಕೂಟರ್‌ ಮತ್ತು ತುಂಡು ಭೂಮಿ ಇದೆ. ಸುಮಾ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಮೊತ್ತ ₹12.45 ಲಕ್ಷ. ಅಶೋಕ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟು ಮೊತ್ತ ₹2.45 ಲಕ್ಷ. ನಗದು ₹1.50 ಲಕ್ಷ ಎಂದು ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ನಲ್ಲಿ ತಮ್ಮ ಹೆಸರಲ್ಲಿ ₹6,273, ಪತ್ನಿ ಹೆಸರಲ್ಲಿ ₹8,006. ಎಲ್‌ಐಸಿ ಪಾಲಿಸಿ ಮೊತ್ತ ₹3 ಲಕ್ಷ. ಸ್ವಂತಕ್ಕೆಚಿನ್ನಾಭರಣ ಹೊಂದಿಲ್ಲ. ₹8 ಲಕ್ಷ ಮೌಲ್ಯದ ಸಣ್ಣ ಭೂಮಿ ಹೊಂದಿದ್ದಾರೆ.

ADVERTISEMENT

ಈರಣ್ಣ ಕಡಾಡಿ: ಈರಣ್ಣ ₹2.35 ಕೋಟಿ ಒಡೆಯ. ₹2 ಲಕ್ಷ ನಗದು, ಪೆಟ್ರೋಲ್‌‌ ಬಂಕ್‌ ಹೊಂದಿದ್ದಾರೆ. ಟೊಯೊಟಾ ಕಾರು, ವಿವಿಧ ಬ್ಯಾಂಕ್‌ಗಳಲ್ಲಿ ₹25.91 ಲಕ್ಷ ಠೇವಣಿ, 60 ಗ್ರಾಂನಷ್ಟು ಚಿನ್ನಾಭರಣ ಇದೆ. ದಂಪತಿ ಹೆಸರಲ್ಲಿ 8.23 ಎಕರೆ ಜಮೀನು, ಮಕ್ಕಳ ಹೆಸರಲ್ಲಿ 8.4 ಎಕರೆ ಜಮೀನು ಇದೆ. ₹60 ಸಾವಿರ ಮೌಲ್ಯದ ರಿವಾಲ್ವರ್‌ ಇದೆ.

ಗೌಡರಿಗಿಂತ ಚನ್ನಮ್ಮ ಶ್ರೀಮಂತರು
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಮ್ಮ ಪತ್ನಿಗಿಂತ ಕಡಿಮೆ ಆದಾಯ ಹೊಂದಿದ್ದಾರೆ. ಓಡಾಟಕ್ಕೆ ಮೂರು ಹಳೇ ಅಂಬಾಸಿಡರ್‌ ಕಾರು, ಕೃಷಿಗಾಗಿ ಎರಡು ಟ್ರ್ಯಾಕ್ಟರ್‌ಗಳನ್ನು ಹೊಂದಿದ್ದಾರೆ.

ದೇವೇಗೌಡರ ವಾರ್ಷಿಕ ಆದಾಯ ₹10.25 ಲಕ್ಷ, ಚನ್ನಮ್ಮ ಅವರ ಆದಾಯ ₹28.17 ಲಕ್ಷ . ಚನ್ನಮ್ಮ ಅವರಿಗೆ ಕೃಷಿ ಮೂಲದಿಂದ ₹1,38,360 ಆದಾಯ ಬರುತ್ತದೆ. ದೇವೇಗೌಡರು ₹37.63 ಲಕ್ಷ, ಚನ್ನಮ್ಮ ₹80.29 ಲಕ್ಷ ನಗದು ಇಟ್ಟುಕೊಂಡಿದ್ದಾರೆ. ಅಲ್ಲದೆ, ₹26.92 ಲಕ್ಷ ಷೇರುಗಳು ಮತ್ತು ಬಾಂಡ್‌ಗಳನ್ನು ಹೊಂದಿದ್ದಾರೆ. ಚನ್ನಮ್ಮ ₹97.98 ಲಕ್ಷ ಸಾಲ ಮಾಡಿದ್ದಾರೆ.

ದೇವೇಗೌಡರ ಆಸ್ತಿ ಮೌಲ್ಯ 2019 ರಲ್ಲಿ ₹67.56 ಲಕ್ಷ ಇದ್ದದ್ದು, ₹72.6 ಲಕ್ಷಕ್ಕೆ ಏರಿಕೆ ಆಗಿದೆ. ಚನ್ನಮ್ಮ ಅವರ ಚರಾಸ್ತಿ₹1.24 ಕೋಟಿಯಿಂದ ₹2.14 ಕೋಟಿಗೂ, ಸ್ಥಿರಾಸ್ತಿ ₹3.67 ಕೋಟಿಯಿಂದ ₹5.38 ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.