ADVERTISEMENT

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ‘ಬಿ’ ಫಾರಂ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 9:14 IST
Last Updated 8 ಜೂನ್ 2020, 9:14 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   
""

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ 'ಬಿ’ ಫಾರಂ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ಖರ್ಗೆ ಅವರಿಗೆ ‘ಬಿ’ ಫಾರಂ ನೀಡಲಾಯಿತು.

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಶಾಸಕರಾದ ಸತೀಶ ಜಾರಕಿಹೊಳಿ, ಆರ್.ವಿ. ದೇಶಪಾಂಡೆ, ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್ ಮತ್ತಿತರರು ಇದ್ದರು.

ADVERTISEMENT
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿ ಫಾರಂ ನೀಡಲಾಯಿತು.

ಖರ್ಗೆ ನಾಮಪತ್ರ ಸಲ್ಲಿಕೆ ವೇಳೆ ನಾಲ್ವರು ಮಾತ್ರ– ಡಿಕೆಶಿ

‘ರಾಜ್ಯಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ. ಅವರಿಗೆ ‘ಬಿ’ ಫಾರಂ ಕೊಟ್ಟಿದ್ದೇವೆ. ನಾಮಪತ್ರ ಸಲ್ಲಿಕೆ ವೇಳೆ ನಾಲ್ಕು ಜನ ಮಾತ್ರ ಹೋಗುತ್ತೇವೆ’ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಮ್ಮದು ಜಾತ್ಯತೀತ ಪಕ್ಷ. ನಾವು ಬಿಜೆಪಿಗೆ ಬೆಂಬಲ ಕೊಡುವುದಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಕೆಲವು ಸೂಚನೆಗಳನ್ನು ಕೊಟ್ಟಿದ್ದೇನೆ. ಯಾರೂ ಯಾರ ಸಂಪರ್ಕದಲ್ಲೂ ಇರಬಾರದು. ಬಿಜೆಪಿಯವರ ಜೊತೆ ಮಾತನಾಡಿದರೆ ಸಾಕು, ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಅವರು ಹೇಳಿಕೊಳ್ಳುತ್ತಾರೆ. ಅವರ ಬಲೆಗೆ ಬೀಳಬೇಡಿ ಎಂದು ಸಲಹೆ ನೀಡಿದ್ದೇನೆ’ ಎಂದರು.

‘ಜೆಡಿಎಸ್‌ಗೆ ಬೆಂಬಲ ಕೊಡುವ ವಿಷಯದಲ್ಲಿ ನಮ್ಮ ಹೈಕಮಾಂಡ್ ಹೇಳಿದಂತೆ ಮಾಡುತ್ತೇವೆ. ಹೈಕಮಾಂಡ್ ಈಗಾಗಲೇ ನನಗೆ ಏನು ಹೇಳಬೇಕೊ ಅದನ್ನು ಹೇಳಿದೆ. ಅದರಂತೆ ಮಾಡುತ್ತೇನೆ’ ಎಂದರು.

‘ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಉದ್ದೇಶದಿಂದ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೆವು. ಸಭೆಗೆ ಎಲ್ಲ ಶಾಸಕರು ಬಂದಿದ್ದರು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ನಾವು ಖರ್ಗೆ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ವಿಷಯದಲ್ಲಿ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಆ ವಿಷಯದಲ್ಲಿ ನಾವು ತಲೆಹಾಕುವುದಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.