ADVERTISEMENT

ರಾಮಮಂದಿರದ ಇಟ್ಟಿಗೆಗಳು ತಿಪ್ಪೆಗುಂಡಿಗೆ

ಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಮುಖ್ಯಮಂತ್ರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 15:37 IST
Last Updated 4 ಜುಲೈ 2018, 15:37 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ    

ಬೆಂಗಳೂರು: ‘ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ್ದ ಇಟ್ಟಿಗೆಗಳನ್ನು ಬಿಜೆಪಿಯವರು ತಿಪ್ಪೆಗುಂಡಿಗೆ ಎಸೆದಿದ್ದಾರೆ. ಜನರ ಹಣವನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ’ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ವಿಧಾನ ಪರಿಷತ್‌ನಲ್ಲಿ ಬುಧವಾರ ಕೋಲಾಹಲಕ್ಕೆ ಕಾರಣವಾಯಿತು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದ ಅವರು, ‘ಸಾಲ ಮನ್ನಾ ಮಾಡಲು ಬಿಜೆಪಿಯವರು ನನಗೆ ಗಡುವು ವಿಧಿಸುತ್ತಿದ್ದಾರೆ. ಬೀದಿಗಿಳಿಯುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣಕ್ಕಾಗಿ 25 ವರ್ಷಗಳ ಹಿಂದೆಯೇ ಹಣ ಸಂಗ್ರಹಿಸಿದ್ದಾರೆ. ರಾಮಮಂದಿರ ನಿರ್ಮಾಣವಾಗಿದೆಯಾ’ ಎಂದು ಕಟುವಾಗಿ ಪ್ರಶ್ನಿಸಿದರು.

ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಇದು ನಮ್ಮ ಧಾರ್ಮಿಕ ಭಾವನೆ. ಅದಕ್ಕೆ ತಳಕು ಹಾಕುವುದು ಬೇಡ’ ಎಂದು ಆಯನೂರು ಮಂಜುನಾಥ ಎಚ್ಚರಿಸಿದರು. ಮುಖ್ಯಮಂತ್ರಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ‘ನಂಬಿಕೆ ಇದ್ದವರು ದುಡ್ಡು ಕೊಟ್ಟಿದ್ದಾರೆ. ನೀವೇನೂ ಹಣ ಕೊಟ್ಟಿಲ್ಲವಲ್ಲ’ ಎಂದು ಆಯನೂರು ಪ್ರಶ್ನಿಸಿದರು. ‘ನಾನು ಹಣ ಕೊಟ್ಟಿದ್ದೇನೆ. ಎಲ್ಲಿದೆ ಆ ಹಣ’ ಎಂದು ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ ಕೇಳಿದರು.

ADVERTISEMENT

ಈ ವೇಳೆ ಆಡಳಿತ ಪಕ್ಷ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ‘ತಿಪ್ಪೆಗುಂಡಿ ಎಂದರೆ ಶುದ್ಧವಾದುದು. ನಮ್ಮ ಕಡೆಗಳಲ್ಲಿ ಅದಕ್ಕೆ ಪೂಜೆ ಮಾಡುತ್ತಿದ್ದೀರಿ’ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು. ಕಾಂಗ್ರೆಸ್‌ನ ರಿಜ್ವಾನ್ ಅರ್ಶದ್‌, ‘ಮುಖ್ಯಮಂತ್ರಿ ಸತ್ಯವನ್ನೇ ಹೇಳಿದ್ದಾರೆ. 100 ದಿನಗಳಲ್ಲಿ ಕಪ್ಪುಹಣವನ್ನು ತರುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಕೇಂದ್ರದಲ್ಲಿ ಅಧಿಕಾರಕ್ಕೆ ಏರಿ 1000 ದಿನಗಳು ಕಳೆದವು. ಇಲ್ಲಿಯವರೆಗೂ ಹಣ ಬಂದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿ ಸಭಾಪತಿ ಪೀಠದ ಎದುರು ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ‘ರಾಮಮಂದಿರ ನಿರ್ಮಾಣ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ವಿವಾದ ಇತ್ಯರ್ಥವಾದ ಬಳಿಕ ಮಂದಿರ ನಿರ್ಮಿಸುತ್ತೇವೆ’ ಎಂದು ಬಿಜೆಪಿಯ ಕೆ.ಬಿ.ಶಾಣಪ್ಪ ಹೇಳಿದರು.

‘ಇದನ್ನು ಘನತೆಯ ವಿಷಯವನ್ನಾಗಿ ತೆಗೆದುಕೊಳ್ಳುವುದಿಲ್ಲ. ಇಲ್ಲಿಗೆ ಈ ವಿಷಯವನ್ನು ಮುಕ್ತಾಯಗೊಳಿಸೋಣ. ನೀವು ಇಟ್ಟಿಗೆಯನ್ನು ಸುರಕ್ಷಿತವಾಗಿ ಇಟ್ಟಿದ್ದೀರಿ. 10–20 ವರ್ಷ ಬಿಟ್ಟು ಮಂದಿರ ನಿರ್ಮಾಣ ಮಾಡಿ. ನಿಮಗೆ ಒಳ್ಳೆಯದಾಗಲಿ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು. ಹೇಳಿಕೆಯನ್ನು ವಾಪಸ್‌ ಪಡೆಯಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ನನ್ನ ಹೇಳಿಕೆಯನ್ನು ವಾಪಸ್‌ ‍ಪಡೆಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದರು.

2 ತಿಂಗಳು ಕಾಲಾವಕಾಶ ಕೊಡಿ: ‘ಬಿಜೆಪಿಯವರು ಗಡಿಬಿಡಿ ಮಾಡುತ್ತಿದ್ದಾರೆ. ಪ್ರಣಾಳಿಕೆಯ ಘೋಷಣೆಗಳನ್ನು ಈಗಲೇ ಈಡೇರಿಸಿ ಎಂದು ಹಠ ಹಿಡಿದಿದ್ದಾರೆ. ನನಗೆ 2 ವರ್ಷ ಬೇಡ, ಕನಿಷ್ಠ 2–3 ತಿಂಗಳಾದರೂ ಕಾಲಾವಕಾಶ ಕೊಡಿ’ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

‘ರೈತರ ಸಾಲ ಮನ್ನಾ ಅಸಾಧ್ಯವೆಂದು ಬಿ.ಎಸ್‌.ಯಡಿಯೂರಪ್ಪ ಅವರು 2009ರಲ್ಲಿ ಸದನದಲ್ಲಿ ಹೇಳಿಕೆ ನೀಡಿದ್ದರು. ಮತ ಗಳಿಕೆಯ ಉದ್ದೇಶದಿಂದ ನೀಡಿರುವ ಹೇಳಿಕೆ ಎಂದು ಸಮರ್ಥಿಸಿಕೊಂಡಿದ್ದರು. ಈಗ ನನಗೆ ಗಡುವು ನೀಡುತ್ತಿದ್ದಾರೆ’ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.