ADVERTISEMENT

ಸವದಿ ವಿರುದ್ಧ ಕಿಡಿಕಾರಿದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 19:30 IST
Last Updated 26 ಅಕ್ಟೋಬರ್ 2019, 19:30 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಅನರ್ಹ ಶಾಸಕರ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಮೇಶ ಜಾರಕಿಹೊಳಿ, ‘ಇಂತಹ ಬೇಜವಾಬ್ದಾರಿ ಹೇಳಿಕೆಯಿಂದಲೇ ಸವದಿ ಹಾಳಾಗಿದ್ದಾನೆ. ಮುಂದೆಯೂ ಹಾಳಾಗುತ್ತಾನೆ. ಹತ್ತು ತಲೆಯ ರಾವಣ ಹಾಳಾಗಿದ್ದಾನೆ. ಇನ್ನು ಇವನ್ಯಾರು’ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ದಾರೆ.

ಇಲ್ಲಿಗೆ ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸೋತಿದ್ದರೂ ಎಲ್ಲಿಂದಲೋ ಅಧಿಕಾರ ಸಿಕ್ಕಿದೆ ಎನ್ನುವ ಸೊಕ್ಕಿನಿಂದಲೇ ಹೀಗೆ ಮಾತನಾಡಿದ್ದಾನೆ. ಅವನಿಗೆ ಶಾಸಕ ಉಮೇಶ ಕತ್ತಿ ಸರಿಯಾಗಿ ಉತ್ತರ ನೀಡಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ’ ಎಂದರು.

‘ಸುಪ್ರೀಂ ಕೋರ್ಟ್‌ನಲ್ಲಿ ಇಷ್ಟು ದಿನಗಳವರೆಗೆ ನಡೆದ ವಾದ– ಪ್ರತಿವಾದಗಳನ್ನು ಗಮನಿಸಿದರೆ, ಉಪ ಚುನಾವಣೆಯಲ್ಲಿ ನಮಗೆ (ಅನರ್ಹ ಶಾಸಕರು) ಸ್ಪರ್ಧಿಸಲು ಅವಕಾಶ ಸಿಗುವ ಸಾಧ್ಯತೆ ಇದೆ. ಇದೇ ತಿಂಗಳ 30ರಿಂದ ನನ್ನ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುತ್ತೇನೆ’ ಎಂದು ಹೇಳಿದರು.

ADVERTISEMENT

ತಮ್ಮ ಬಗ್ಗೆ ಸಹೋದರ, ಶಾಸಕ ಸತೀಶ ಜಾರಕಿಹೊಳಿ ಮಾಡಿರುವ ವಿಡಿಯೊ ಹಾಡಿನ ಬಗ್ಗ ಪ್ರತಿಕ್ರಿಯಿಸಿದ ಅವರು, ‘ಅವನ ಬಗ್ಗೆ ವಿಡಿಯೊ ಮಾಡಿದರೆ ಮನೆಗೆ ಓಡಿ ಹೋಗಬೇಕಾಗುತ್ತದೆ. ಕುಟುಂಬದ ಬಗ್ಗೆ ಅವಮಾನವಾಗಬಾರದೆಂದು ಬಹಳಷ್ಟು ತಾಳ್ಮೆ ವಹಿಸಿಕೊಂಡಿದ್ದೇನೆ. ಅವನ ತಲೆಕೆಟ್ಟಿದೆ. ಧಾರವಾಡ ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗಿದೆ’ ಎಂದು ಹರಿಹಾಯ್ದರು.

‘ಸದ್ಯದಲ್ಲಿಯೇ ಗೋಕಾಕದಲ್ಲಿ ಸಮಾವೇಶ ಮಾಡುತ್ತೇನೆ. ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಜೊತೆಗೂಡಿ, ಸತೀಶನ ಬಗ್ಗೆ ಮಾತನಾಡುವೆ. ಸತೀಶ ಬೇಕಿದ್ದರೆ ಇನ್ನೊಂದು ವಿಡಿಯೊ ಮಾಡಲಿ. ಅವನೇನು ದೊಡ್ಡ ನಾಯಕ ಅಲ್ಲ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.