ADVERTISEMENT

ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದು ಖಚಿತ; ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 14:37 IST
Last Updated 23 ಏಪ್ರಿಲ್ 2019, 14:37 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದು ಸ್ಪಷ್ಟ. ಆದರೆ, ಯಾವಾಗ ಎನ್ನುವುದನ್ನು ಈಗಲೇ ಹೇಳಲಾರೆ. ಕಾಂಗ್ರೆಸ್‌ನಲ್ಲಿ ಮೊದಲಿನ ಪರಿಸ್ಥಿತಿ ಇಲ್ಲ. 1999ರ ನಂತರ ಕಚ್ಚಾಟ ಶುರುವಾಗಿದೆ. ವ್ಯಕ್ತಿ ಪ್ರತಿಷ್ಠೆಯಲ್ಲಿ ಕಾಂಗ್ರೆಸ್‌ ನರಳಾಡುತ್ತಿದೆ. ನಿಜವಾದ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಗೋಕಾಕ ನಗರದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಗೆ ಮತ ಚಲಾಯಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಸಹೋದರ, ಸಚಿವ ಸತೀಶ ಜಾರಕಿಹೊಳಿ ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಏನೇನೋ ಹೇಳುತ್ತಿದ್ದಾರೆ. ನಾನು ಎಲ್ಲಿಯೂ ಬಿಜೆಪಿ ಪರ ಪ್ರಚಾರ ಮಾಡುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಚನೆ ನೀಡಿಲ್ಲ. ನಾನಿನ್ನೂ ಕಾಂಗ್ರೆಸ್‌ನಲ್ಲಿದ್ದೇನೆ. ಕಾಂಗ್ರೆಸ್‌ ಬಿಟ್ಟ ನಂತರ ಇದಕ್ಕೆಲ್ಲ ಉತ್ತರ ನೀಡುತ್ತೇನೆ’ ಎಂದು ಹರಿಹಾಯ್ದರು.

ADVERTISEMENT

‘ಗೋಕಾಕದಿಂದ ಸ್ಪರ್ಧಿಸಲು ಸಹೋದರ ಲಖನ್‌ ಜಾರಕಿಹೊಳಿ ಅವರೇ ಸೂಕ್ತ. ಅವರು ಶಾಸಕನಾದರೆ ಮೊದಲು ನಾನು ಸಂತೋಷ ಪಡುತ್ತೇನೆ. ಅವರಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಕತ್ತಲಲ್ಲಿ ಕುಳಿತು ರಾಜಕಾರಣ ಮಾಡುವವನು ನಾನಲ್ಲ. ಈಗಾಗಲೇ ಒಬ್ಬ ಸಹೋದರನನ್ನು ಹಾಳು ಮಾಡಿರುವ ಸತೀಶ, ಈಗ ಇನ್ನೊಬ್ಬ ಸಹೋದರನನ್ನು ಹಾಳು ಮಾಡಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

ಕಿರೀಟ ನೀಡಬೇಕಿತ್ತಾ?:‘ಇತಿಹಾಸ ತೆಗೆದುನೋಡಿ, ಯಾರು ಯಾರನ್ನು ಹಾಳು ಮಾಡಿದ್ದಾರೆ ಎನ್ನುವುದು ತಿಳಿಯುತ್ತೆ. ಸಮ್ಮಿಶ್ರ ಸರ್ಕಾರದಲ್ಲಿ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಅವರು ಸರಿಯಾಗಿ ಕೆಲಸ ಮಾಡಲಿಲ್ಲ. ಅವರಿಗೇನು ಕಿರೀಟ ನೀಡಬೇಕಿತ್ತಾ?’ ಎಂದು ಸತೀಶ ತಿರುಗೇಟು ನೀಡಿದ್ದಾರೆ.

ಗೋಕಾಕ ತಾಲ್ಲೂಕಿನ ಮಲಾಮರಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ಕುರಿತು ಬೇಗ ನಿರ್ಣಯ ಕೈಗೊಳ್ಳಲಿ’ ಎಂದು ಸವಾಲೆಸೆದರು.

‘ಗೋಕಾಕದಲ್ಲಿ ಲಖನ್‌ ಸ್ಪರ್ಧಿಸುವ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ. ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಸ್ವಾಗತ’ ಎಂದರು.

ಗೊತ್ತಿಲ್ಲ:‘ನಾನು, ಸತೀಶ ಹಾಗೂ ರಮೇಶ ಕಳೆದ 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿಯೇ ಇದ್ದೇವೆ. ರಾಜ್ಯದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ನಮ್ಮ ನಾಯಕರಾಗಿದ್ದಾರೆ. ಅವರ ಸೂಚನೆಯಂತೆ ಕಾಂಗ್ರೆಸ್‌ ಬೆಂಬಲಿಸುತ್ತಿದ್ದೇನೆ. ಯಾವ ಕಾರಣಕ್ಕೆ ರಮೇಶ ಈ ರೀತಿ ಹೇಳಿಕೆ ನೀಡಿದ್ದಾರೆಯೋ ಗೊತ್ತಿಲ್ಲ’ ಎಂದು ಲಖನ್‌ ಜಾರಕಿಹೊಳಿ ಹೇಳಿದರು.

ತೋಳ ಬಂತು ತೋಳ:‘ರಮೇಶ ಅವರು ಮತದಾನದ ದಿನ ಇಂತಹ ಹೇಳಿಕೆ ನೀಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ಯಾವ ಉದ್ದೇಶಕ್ಕಾಗಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇವತ್ತು ರಾಜೀನಾಮೆ ಕೊಡ್ತೇನಿ, ನಾಳೆ ಕೊಡ್ತೇನಿ ಅಂತಿದ್ದಾರೆ. ಕಳೆದ 6 ತಿಂಗಳಿನಿಂದ ಹೇಳಿಕೆ ನೀಡುತ್ತಿದ್ದಾರೆ. ತೋಳ ಬಂತು ತೋಳ ಎನ್ನುವ ಹಾಗೆ ಮಾಡುತ್ತಿದ್ದಾರೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟಾಂಗ್‌ ನೀಡಿದ್ದಾರೆ.

‘ಅವರು ರಾಜೀನಾಮೆ ನೀಡಿದರೆ ಪಕ್ಷದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ’ ಎಂದು ಹೇಳಿದರು.

ಸರ್ಕಾರ ಪತನ:‘ಸದ್ಯದಲ್ಲಿಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ಖಚಿತ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

‘ನಾನು ಡಿಸಿಎಂ ಆಗಲ್ಲ, ಆಗುವುದಾದರೆ ಮುಖ್ಯಮಂತ್ರಿಯೇ ಆಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.