ADVERTISEMENT

ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣ: ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 19:31 IST
Last Updated 9 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮಾಜಿ ಸಚಿವ ರಮೇಶಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣದ ತನಿಖಾ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿಯವರು ಪರಿಶೀಲಿಸಿ ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಅಂತಿಮ ವರದಿ ಸಲ್ಲಿಸುವ ವೇಳೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದರು’ ಎಂಬ ಅಂಶವನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಪೀಠ, ‘ಈ ಸಂಬಂಧದ ಅಂತಿಮ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಮುಖರ್ಜಿ ಅವರು ಪರಿಶೀಲಿಸಿ ಅದನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಬೇಕು. ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ’ ಎಂದು ನಿರ್ದೇಶಿಸಿದೆ.

ADVERTISEMENT

ವಿಚಾರಣೆ ವೇಳೆ ಸಂತ್ರಸ್ತ ಯುವತಿ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ವಕೀಲೆ ಇಂದಿರಾ ಜೈಸಿಂಗ್, ‘ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಲಾಗಿದೆ. ಮುಖ್ಯಸ್ಥರ ಸಹಿ ಇಲ್ಲದೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಗೆ ಬೆಲೆಯಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ದಾಖಲಿಸಲು ಅನುಮತಿ ನೀಡಬಾರದು’ ಎಂದು ಮನವಿ ಮಾಡಿದರು.

ಎಸ್‌ಐಟಿ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ‘ತನಿಖೆಯನ್ನು ನಿಯಮಬದ್ಧವಾಗಿಯೇ ಪೂರ್ಣಗೊಳಿಸಲಾಗಿದೆ. ಅಲ್ಲದೆ, ಆರೋಪ ಪಟ್ಟಿಯಲ್ಲಿ ಏನಾದರೂ ಲೋಪಗಳಿದ್ದಲ್ಲಿ ಮ್ಯಾಜಿಸ್ಟ್ರೇಟರು ಪರಿಶೀಲಿಸಲು ಅವಕಾಶವಿದೆ. ಆದ್ದರಿಂದ, ಆರೋಪ ಪಟ್ಟಿ ಸಲ್ಲಿಕೆಗೆ ಅವಕಾಶ ನೀಡಬೇಕು’ ಎಂದು ಪ್ರತಿಪಾದಿಸಿದರು.

ಎಸ್‌ಐಟಿ ಮುಖ್ಯಸ್ಥರು ತನಿಖಾ ವರದಿಯನ್ನು ಪರಿಶೀಲಿಸಿ ವರದಿಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ಸಲ್ಲಿಸುವವರೆಗೂ ಆರೋಪ ಪಟ್ಟಿ ಸಲ್ಲಿಸದಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.