ADVERTISEMENT

ಸಿ.ಡಿ ಪ್ರಕರಣ: ಎಸ್ಐಟಿ ಸತ್ಯಾಸತ್ಯತೆ ಕಂಡು ಹಿಡಿಯುತ್ತದೆ -ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 7:57 IST
Last Updated 28 ಮಾರ್ಚ್ 2021, 7:57 IST
   

ಬೆಂಗಳೂರು: 'ಸಿ.ಡಿ ಪ್ರಕರಣದಲ್ಲಿ ಆಡಿಯೊ, ವಿಡಿಯೊ, ಸಿಡಿಗಳ ಪರಿಶೀಲನೆ ಎಲ್ಲವನ್ನೂ ವೈಜ್ಞಾನಿಕವಾಗಿ ಎಸ್ಐಟಿ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಅದಕ್ಕೆ ಒಂದು ಪದ್ದತಿ, ವ್ಯವಸ್ಥೆ ಇದೆ. ಎಸ್ಐಟಿ ತಂಡ ಖಂಡಿತವಾಗಿಯೂ ಇದರ ಸತ್ಯ ಸತ್ಯತೆ ಕಂಡು ಹಿಡಿಯುತ್ತದೆ. ಇದರಲ್ಲಿ ಯಾವುದೇ ಪ್ರಶ್ನೆಯೇ ಇಲ್ಲ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, 'ನಾನು ಒಬ್ಬ ಗೃಹ ಸಚಿವ. ಬೇರೆಯವರ ಹೇಳಿಕೆಗೆಲ್ಲ ಪ್ರತಿಕ್ರಿಯೆ ಕೇಳಬೇಡಿ. ಎಸ್ಐಟಿ ಕೆಲಸ ಮಾಡುತ್ತಿದೆ, ಕೆಲಸ ಮಾಡೋಕೆ ಬಿಡಿ' ಎಂದರು.

'ಸಿದ್ದರಾಮಯ್ಯ ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗಿದೆ. ಮೇಟಿ ಪ್ರಕರಣದಲ್ಲಿ ಸಿಐಡಿಗೆ ಕೊಟ್ಟು ಮುಚ್ಚಿಹಾಕಿದ್ರು. ಮೇಟಿ ವಿರುದ್ಧ ಕೇಸ್ ದಾಖಲು ಆಗಲಿಲ್ಲ. ನಾವು ಯುವತಿ ದೂರು ಕೊಟ್ಟ ಬಳಿಕ ಎಫ್ ಐಆರ್ ದಾಖಲಿಸಿದ್ದೇವೆ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಯಾರು ಏನೇ ಹೇಳಿಕೆ ಕೊಡಲಿ, ನಮ್ಮ ಪೊಲೀಸರು ಕ್ರಮಬದ್ಧವಾಗಿ ತನಿಖೆ ಮಾಡುತ್ತಾರೆ' ಎಂದರು.

ADVERTISEMENT

ವಿರೋಧ ಪಕ್ಷ ನಾಯಕರ ಸಹಕಾರ ಇದ್ದರೆ ಜಡ್ಜ್ ಮುಂದೆ ಹಾಜರಾಗುವ ಯುವತಿ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ನಾನು ಈಗಾಗಲೇ ಹೇಳಿಕೆ ಕೊಟ್ಟಿದ್ದೇನೆ. ಈಗಾಗಲೇ ನಾವುಯುವತಿಗೆ 5 ನೋಟಿಸ್ ಕೊಟ್ಟಿದ್ದೇವೆ. ಆಕೆಗೆ ಸುರಕ್ಷತೆ ಕೊಡ್ತೇವೆ ಎಂದೂ ಹೇಳಿದ್ದೇವೆ. ಈಗಾಗಲೇ ಅವರ ತಂದೆ ತಾಯಿಗೆ ಸುರಕ್ಷತೆ ಕೊಟ್ಟಿದ್ದೇವೆ. ಸವಳಿಗೂ ಕೊಡ್ತೇವೆ, ಇದರಲ್ಲಿ ಯಾವುದೇ ಸಂಶಯ ಇಲ್ಲ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.