ADVERTISEMENT

ಜಾರಕಿಹೊಳಿ ‘ರಹಸ್ಯ’ ಕಾರ್ಯಾಚರಣೆ

ಸಂಪುಟಕ್ಕೆ ಆಪ್ತೇಷ್ಟರರ ಸೇರ್ಪಡೆಯ ಪ್ರತ್ಯೇಕ ಕೋರಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 1:24 IST
Last Updated 21 ನವೆಂಬರ್ 2020, 1:24 IST
 ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೊಳಿ   

ನವದೆಹಲಿ: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಮುನ್ನುಡಿ ಬರೆದಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಇದೀಗ ಮತ್ತೊಂದು ‘ರಹಸ್ಯ ಕಾರ್ಯಾಚರಣೆ’ಗೆ ಕೈಹಾಕಿದ್ದಾರೆಯೇ?

ಕಳೆದ 3 ದಿನಗಳಿಂದ ಇಲ್ಲೇ ಬೀಡು ಬಿಟ್ಟಿರುವ ಜಾರಕಿಹೊಳಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರನ್ನು ಶುಕ್ರವಾರ ಭೇಟಿಯಾಗಿರುವುದು ಇಂಥ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್‌– ಜೆಡಿಎಸ್‌ ತೊರೆದು ಬಂದು ಬಿಜೆಪಿ ಬೆಂಬಲಿಸಿ ‘ಅನರ್ಹ’ರಾಗಿದ್ದ ಆಪ್ತೇಷ್ಟರರಿಗೆ ಕೂಡಲೇ ಸಚಿವ ಸ್ಥಾನ ನೀಡುವಂತೆ ಅವರು ಭೇಟಿಯ ವೇಳೆ ಮನವಿ ಸಲ್ಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮುುಖ್ಯಮಂತ್ರಿ ಯಡಿಯೂರಪ್ಪ ಅವರೂ ಕಳೆದ ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ಸಂದರ್ಭ ಇದೇ ಪ್ರಸ್ತಾವ ಇರಿಸಿದ್ದಾರೆ. ಅವರದ್ದೇ ಸಂಪುಟದ ಸಹೋದ್ಯೋಗಿಯೊಬ್ಬರಿಂದ ಇದೀಗ ಅಂಥದ್ದೇ ಪ್ರಸ್ತಾವ
ವೊಂದು ಪ್ರತ್ಯೇಕವಾಗಿ ಸಲ್ಲಿಕೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.

ತಮ್ಮ ಇಲಾಖೆಯ ಕಾರ್ಯ ನಿಮಿತ್ಯ ದೆಹಲಿಗೆ ಬಂದಿದ್ದಾಗಿ ಹೇಳಿಕೊಂಡರೂ ಕರ್ನಾಟಕ ಭವನದತ್ತ ಸುಳಿಯದೆ ‘ಶಿಷ್ಟಾಚಾರ’ ಬದಿಗೊತ್ತಿರುವ ಜಾರಕಿ ಹೊಳಿ, ಇಲ್ಲಿಗೆ ಬಂದಿದ್ದ ಯಡಿಯೂರಪ್ಪ ಅವರನ್ನೂ ಭೇಟಿ ಮಾಡದೆ ಅಚ್ಚರಿ ಮೂಡಿಸಿದ್ದರು.

ಸಂಪುಟ: ಮತ್ತಷ್ಟು ವಿಳಂಬ ಸಾಧ್ಯತೆ

ಸಚಿವ ಸಂಪುಟದ ಪುನಾರಚನೆ ಅಥವಾ ವಿಸ್ತರಣೆಗೆ ಅವಕಾಶ ಕೋರಿ ಬಿ.ಎಸ್‌. ಯಡಿಯೂರಪ್ಪ ಸಲ್ಲಿಸಿರುವ ಬೇಡಿಕೆ ಈಡೇರುವುದು ಮತ್ತಷ್ಟು ವಿಳಂಬವಾಗಲಿದೆ.

ಈ ಸಂಬಂಧ ಹಸಿರು ನಿಶಾನೆ ತೋರಲು ನಾಲ್ಕಾರು ದಿನಗಳ ಕಾಲಾವಕಾಶ ಪಡೆದಿರುವ ಬಿಜೆಪಿ ಹೈಕಮಾಂಡ್‌, 3 ದಿನ ಕಳೆದರೂ ಸಂಬಂಧಿಸಿದವರ ಜೊತೆ ಯಾವುದೇ ರೀತಿಯ ಚರ್ಚೆ, ಸಮಾಲೋಚನೆ ನಡೆಸದಿರುವುದು ಸಂಪುಟ ಪುನಾರಚನೆಯ ಕಸರತ್ತನ್ನು ಮತ್ತಷ್ಟು ಕಗ್ಗಂಟಾಗಿಸಲಿದೆ.

ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದ ನಂತರವೇ ಪಕ್ಷದ ಹೈಕಮಾಂಡ್‌ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.‘ವರಿಷ್ಠರು ಯಡಿಯೂರಪ್ಪ ಅವರ ಬೇಡಿಕೆಯನ್ನು ಯಾವ ಉದ್ದೇಶದಿಂದ ಕಡೆಗಣಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಆದರೆ,ಕಡೆಗಣೆನೆಯ ಹಿಂದೆ ಬಲವಾದ ಕಾರಣವಂತೂ ಇದೆ. ನಾಯಕತ್ವ ಬದಲಾವಣೆಯೂ ಕಾರಣವಾಗಿರುವ ಸಾಧ್ಯತೆಗಳೂ ಇಲ್ಲದಿಲ್ಲ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.