ADVERTISEMENT

ಜಾರಕಿಹೊಳಿ ಸಿ.ಡಿ ಪ್ರಕರಣ: ಪೊಲೀಸರ ಎದುರು ಹಾಜರಾದ ದೂರುದಾರ ದಿನೇಶ್ ಕಲ್ಲಹಳ್ಳಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 18:40 IST
Last Updated 5 ಮಾರ್ಚ್ 2021, 18:40 IST
 ದಿನೇಶ್ ಕಲ್ಲಹಳ್ಳಿ
ದಿನೇಶ್ ಕಲ್ಲಹಳ್ಳಿ   

ಬೆಂಗಳೂರು: ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ವಿಚಾರಣೆಗೆ ಭದ್ರತೆ ನೆಪವೊಡ್ಡಿ ಗುರುವಾರ ಗೈರಾಗಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ, ಶುಕ್ರವಾರ ಮಧ್ಯಾಹ್ನ ದಿಢೀರ್‌ ಆಗಿ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು.

ಕಬ್ಬನ್‌ ಪಾರ್ಕ್ ಠಾಣೆಗೆ ಬಂದ ದಿನೇಶ್, ಇನ್‌ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿ ಅವರ ಎದುರು ವಿಚಾರಣೆ ಎದುರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿದ್ಧಪಡಿಸಿಟ್ಟುಕೊಂಡಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

‘ರಮೇಶ ಜಾರಕಿಹೊಳಿ ಅವರು ಕೆಲಸದ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯ ಎಸಗಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ಆರೋಪಿಸಿದ್ದ ದೂರಿನಲ್ಲಿರುವ ಗೊಂದಲಗಳ ಬಗ್ಗೆಯೂ ಪೊಲೀಸರು ಸ್ಪಷ್ಟನೆ ಪಡೆದುಕೊಂಡರು.

ADVERTISEMENT

‘ಸಿ.ಡಿ ಕೊಟ್ಟಿದ್ದು ಯಾರು? ಸಂತ್ರಸ್ತೆ ಹೆಸರು ಹಾಗೂ ವಿಳಾಸ ಗೊತ್ತಾ ? ಪ್ರಕರಣದ ಬಗ್ಗೆ ಸಿ.ಡಿ ಬಿಟ್ಟು ಬೇರೆ ಯಾವೆಲ್ಲ ಪುರಾವೆಗಳು ತಮ್ಮ ಬಳಿ ಇವಯೇ’ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ದಿನೇಶ್ ಉತ್ತರ ನೀಡಿರುವುದಾಗಿ ಗೊತ್ತಾಗಿದೆ.

ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದು ಸುದ್ದಿಗಾರರ ಜೊತೆ ಮಾತನಾಡಿದ ದಿನೇಶ್, ‘ನನ್ನಲ್ಲಿರುವ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ಪೊಲೀಸರು ದೂರು ದಾಖಲಿಸಿಕೊಳ್ಳುವ ವಿಶ್ವಾಸವಿದೆ’ ಎಂದರು. ‘ಯುವತಿ ನನ್ನ ಸಂಪರ್ಕದಲ್ಲಿ ಇಲ್ಲ. ಅವರ ಕುಟುಂಬಸ್ಥರೊಬ್ಬರು ನನ್ನನ್ನು ಭೇಟಿಯಾಗಿದ್ದರು. ಯುವತಿ ಪರ ಹೋರಾಟ ಮಾಡಿ ಎಂದಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ್ದೇನೆ.ನನ್ನ ದೂರಿಗೆ ಬದ್ಧನಾಗಿದ್ದೇನೆ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.