ADVERTISEMENT

ಸಿ.ಡಿ ಪ್ರಕರಣ: ₹5 ಕೋಟಿಗೆ ಬ್ಲ್ಯಾಕ್‌ಮೇಲ್‌–ಜಾರಕಿಹೊಳಿ

ಸಿ.ಡಿ ಪ್ರಕರಣ: ರಮೇಶ ಮನೆಗೇ ತೆರಳಿ ಹೇಳಿಕೆ ದಾಖಲಿಸಿಕೊಂಡ ವಿಶೇಷ ತನಿಖಾ ತಂಡ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 21:48 IST
Last Updated 16 ಮಾರ್ಚ್ 2021, 21:48 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ರಮೇಶ ಅವರ ಹೇಳಿಕೆಯನ್ನು ಸೋಮವಾರ ರಾತ್ರಿ ದಾಖಲಿಸಿಕೊಂಡಿದ್ದಾರೆ.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತರ ಹೇಳಿಕೆಯನ್ನು ಪಡೆಯುತ್ತಿದ್ದಾರೆ. ದೂರುದಾರ ರಮೇಶ ಹೇಳಿಕೆಯನ್ನೂ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ರಮೇಶ ಹೇಳಿದ್ದೇನು: ‘ಯುವತಿ ಜತೆಗಿನ ನಕಲಿ ವಿಡಿಯೊ ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದ ತಂಡ, ನನ್ನಿಂದ ಸ್ವಲ್ಪ ಹಣ ಸುಲಿಗೆ ಮಾಡಿತ್ತು. ನಾನು ಹೆದರಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ತಂಡ, ಮೊದಲು ₹5 ಕೋಟಿ ಕೇಳಿ, ಬಳಿಕ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿತ್ತು. ಕೇಳಿದಷ್ಟು ಹಣ ನೀಡಲಿಲ್ಲವೆಂದು ತಂಡದ ಸದಸ್ಯರು ಸಂಚು ರೂಪಿಸಿ ಸಿ.ಡಿ ಬಹಿರಂಗಪಡಿಸಿದ್ದಾರೆ’ ಎಂದು ರಮೇಶ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ADVERTISEMENT

‘ನನ್ನ ಆಪ್ತರಲ್ಲಿ ಒಬ್ಬರಾದ ಮಾಜಿ ಶಾಸಕ ಎಂ.ವಿ.ನಾಗರಾಜ್ ಅವರನ್ನು ಸಂಪರ್ಕಿಸಿದ್ದ ತಂಡದ ಸದಸ್ಯರು, ‘ರಮೇಶ ಜಾರಕಿಹೊಳಿ ಅವರ ಸಿ.ಡಿ ನಮ್ಮ ಬಳಿ ಇದೆ. ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತೇವೆ. ಆ ರೀತಿ ಮಾಡಬಾರದೆಂದರೆ ಹಣ ಕೊಡಿಸಿ’ ಎಂದಿದ್ದರು. ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸುತ್ತಿರುವ ಹಾಗೂ ನಕಲಿ ವಿಡಿಯೊ ಸೃಷ್ಟಿಸಿ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದ ತಂಡದ ಬಗ್ಗೆ ನಾಗರಾಜ್‌ ಗಮನಕ್ಕೆ ತಂದಿದ್ದರು. ಸುಮ್ಮನೇ ಏಕೆ ಮರ್ಯಾದೆ ಕಳೆದುಕೊಳ್ಳುವುದು ಎಂದು ಸ್ವಲ್ಪ ಹಣವನ್ನು ಆರೋಪಿಗಳಿಗೆ ಕೊಟ್ಟಿದ್ದೆ.’

‘ಹಣದ ರುಚಿ ಹತ್ತುತ್ತಿದ್ದಂತೆ ಆರೋಪಿಗಳು ಪುನಃ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ನಿರಾಕರಿಸಿದ್ದೆ. ಅದೇ ಸಿ.ಡಿ ಇಟ್ಟುಕೊಂಡು ತಂಡದ ಸದಸ್ಯರು, ಎದುರಾಳಿಗಳ ಬಳಿ ಹೋಗಿರಬಹುದು. ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ಸಿ.ಡಿ ಬಿಡುಗಡೆ ಮಾಡಿರುವ ಅನುಮಾನವೂ ಇದೆ. ಇದರಲ್ಲಿ ಮಹಾನಾಯಕನ ಪಾತ್ರವೂ ಇರಬಹುದು. ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿ’ ಎಂದು ಹೇಳಿಕೆಯಲ್ಲಿ ರಮೇಶ ತಿಳಿಸಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.