ADVERTISEMENT

ಜಾರಕಿಹೊಳಿ–ಶಿವನಗೌಡ ಚರ್ಚೆ

ನಿಲ್ಲದ ‘ಆಪರೇಷನ್ ಕಮಲ’?

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:00 IST
Last Updated 9 ಮಾರ್ಚ್ 2019, 19:00 IST
 ರಮೇಶ ಜಾರಕೊಹೊಳಿ
ರಮೇಶ ಜಾರಕೊಹೊಳಿ    

ಬೆಂಗಳೂರು: ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ ಜಾರಕೊಹೊಳಿ (ಗೋಕಾಕ) ಅವರನ್ನು ಬಿಜೆಪಿ ಶಾಸಕ ಶಿವನಗೌಡ ನಾಯಕ್‌ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಮತ್ತೆ ‘ಆಪರೇಷನ್‌ ಕಮಲ’ದ ಚರ್ಚೆಗೆ ವಸ್ತುವಾಗಿದೆ.

ಸೆವೆನ್‌ ಮಿನಿಸ್ಟರ್ಸ್‌ ಕ್ವಾಟ್ರರ್ಸ್‌ನಲ್ಲಿ ಶನಿವಾರ ಬೆಳಿಗ್ಗೆ ಇಬ್ಬರೂ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ, ಮತ್ತೊಬ್ಬ ಕಾಂಗ್ರೆಸ್‌ ಅತೃಪ್ತ ಶಾಸಕ ಮಹೇಶ ಕುಮಠಳ್ಳಿ (ಅಥಣಿ) ಕೂಡಾ ಇದ್ದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮೂವರು ಶಾಸಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮಾತೃಪಕ್ಷದಿಂದ ದೂರ ಸರಿದಿರುವ ರಮೇಶ ಜಾರಕಿಹೊಳಿ ಮತ್ತು ಅವರ ಜೊತೆ ಗುರುತಿಸಿಕೊಂಡಿರುವ ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಮತ್ತು ಕುಮಠಳ್ಳಿ ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದೆ. ಜಾರಕಿಹೊಳಿ ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಯ ಬೆನ್ನಲ್ಲೆ ಈ ಭೇಟಿ ನಡೆದಿರುವುದು ಕುತೂಹಲ ಮೂಡಿಸಿದೆ. ಅತೃಪ್ತರ ಜೊತೆ ಗುರುತಿಸಿಕೊಂಡಿದ್ದ ಚಿಂಚೋಳಿ ಶಾಸಕ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಅವರು ಕಲಬುರ್ಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತ.

ADVERTISEMENT

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಕಾರಣಕ್ಕೆ ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ ಕುಮಠಳ್ಳಿ ಮತ್ತು ಉಮೇಶ ಜಾಧವ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕಾಂಗ್ರೆಸ್‌ ನೀಡಿರುವ ಮನವಿ ಸಂಬಂಧ ಸಭಾಧ್ಯಕ್ಷರು ಅವರೆಲ್ಲರಿಗೂ ನೋಟಿಸ್‌ ನೀಡಿದ್ದರು. ಆ ನೋಟಿಸ್‌ಗೆ ಉತ್ತರ ನೀಡಿದ್ದರೂ ಇದೇ 12ರಂದು ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಸಭಾಧ್ಯಕ್ಷರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.