ರಮೇಶ ಜಿಗಜಿಣಗಿ
ವಿಜಯಪುರ: ‘ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ದಲಿತರು ಮುಖ್ಯಮಂತ್ರಿಯಾಗಲಿ ಎಂಬುದು ನನ್ನ ಆಶಯವಾಗಿದೆ’ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
‘ಬಿಜೆಪಿಯ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಆಗುತ್ತಾರೆ’ ಎಂಬ ವಿಷಯದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ನನಗೆ ಅಸಮಾದಾನ ಇಲ್ಲ. ಆದರೆ, ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಆಶಯವಾಗಿದೆ’ ಎಂದರು.
‘ರಾಜ್ಯದಲ್ಲಿ ದಲಿತ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಆಗಲಿ ಎಂದು ನಾನು ನನ್ನ ರಾಜಕೀಯ ಕೊನೆವರೆಗೂ ಬೇಡಿಕೆ ಇಡುತ್ತಲೇ ಇರುತ್ತೇನೆ. ಆದರೆ, ದಲಿತರನ್ನು ಮುಖ್ಯಮಂತ್ರಿ ಮಾಡುತ್ತಾರೋ, ಇಲ್ಲವೋ ಎಂಬುದು ಪಕ್ಷಕ್ಕೆ ಬಿಟ್ಟ ತೀರ್ಮಾನ’ ಎಂದರು.
‘ದೇವರು ನನಗೆ ಜೀವನದಲ್ಲಿ ಎಲ್ಲವೂ ಈ ಕೊಟ್ಟಿದ್ದಾನೆ, ಯಾರ ಬಳಿಯೂ ಕೈಯೊಡ್ಡದೇ ಹಣ, ಆಸ್ತಿ ಕೊಟ್ಟಿದ್ದಾನೆ, ನಾನು ಕೇಂದ್ರದಲ್ಲಿ ಸಚಿವನಾಗಿದ್ದೇನೆ, ರಾಜ್ಯದಲ್ಲಿ 19 ವರ್ಷ ಮಂತ್ರಿಯಾಗಿದ್ದೇನೆ, 45 ವರ್ಷ ರಾಜಕಾರಣ ಮಾಡಿದ್ದೇನೆ, ಬೇರೆ ಬೇರೆ ಪಕ್ಷಗಳಿಂದ ಮೂರು ಬಾರಿ ಸಂಸದನಾಗಿದ್ದೇನೆ, ನಾನು ವೈಯುಕ್ತಿಕವಾಗಿ ಏನು ಬೇಡಲ್ಲ, ಸಮಾಜಕ್ಕಾಗಿ ಕೇಳುತ್ತೇನೆ, ನನ್ನನ್ನು ಸಿಎಂ ಮಾಡುವುದು, ಬಿಡುವುದು ನಮ್ಮ ಪಕ್ಷದವರಿಗೆ ಬಿಟ್ಟಿದ್ದು, ನಾನು ನನ್ನ ಅಭಿಪ್ರಾಯ ಮಾತ್ರ ಹೇಳುತ್ತೇನೆ’ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ...
‘45 ವರ್ಷಗಳಿಂದ ರಾಜ್ಯ, ದೇಶದ ರಾಜಕಾರಣ ನೋಡಿಕೊಂಡು ಬಂದಿದ್ದೇನೆ. ಕರ್ನಾಟಕದಲ್ಲಿ ಈಗಿರುವಷ್ಟು ಕೆಟ್ಟ ಸರ್ಕಾರವನ್ನು ಎಂದೂ ಕಂಡಿಲ್ಲ, ಇದು ಅತ್ಯಂತ ಹೊಲಸು ಸರ್ಕಾರ’ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ಮುಸ್ಲಿಂ, ಮಧ್ಯಾಹ್ನ ದಲಿತರು, ಸಂಜೆ ಹಿಂದುಳಿದವರ ಹೆಸರು ಹೇಳುತ್ತಾರೆ. ಇವಿಷ್ಟೇ ಸಮದಾಯಗಳಿಂದ ಮಾತ್ರ ಸರ್ಕಾರ ಆಗುತ್ತಾ? ಬೇರೆ ಸಮಾಜಗಳು ಬೇಡವೇ’ ಎಂದು ಪ್ರಶ್ನಿಸಿದರು.
‘ಮುಂದಿನ ದಿನಗಳಲ್ಲಿ ದೇವರು ಕೂಡ ಕಾಂಗ್ರೆಸ್‌ನವರನ್ನು ಕಾಪಾಡಲು ಆಗಲ್ಲ, ರಾಜ್ಯದಲ್ಲಿ ಭ್ರಷ್ಟಾಚಾರ, ಅತ್ಯಾಚಾರ ಹೆಚ್ಚಾಗುತ್ತಿದೆ, ರಾಜ್ಯದಲ್ಲಿ ಮುಂದಿನ ಚುನಾವಣೆ ನಾಳೆಯೇ ನಡೆದರೂ ಕಾಂಗ್ರೆಸ್‌ಗೆ ಅಧಿಕಾರ ಸಿಗಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.