ADVERTISEMENT

ಜೇನುಕುರುಬರ ರಾಮುಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಕೊಡಗಿನ ಪ್ರತಿಭಾವಂತ ಕಲಾವಿದ ರಾಮು, ಕೊಡವರ ಕುಣಿತ ಕಲೆಗೆ ಸಿಕ್ಕ ಮನ್ನಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 15:23 IST
Last Updated 26 ಫೆಬ್ರುವರಿ 2020, 15:23 IST
ಕೊಳಲು ವಾದನದಲ್ಲಿ ಜೆ.ಕೆ ರಾಮು
ಕೊಳಲು ವಾದನದಲ್ಲಿ ಜೆ.ಕೆ ರಾಮು   

ಗೋಣಿಕೊಪ್ಪಲು: ಚೊಟ್ಟೆಪಾರಿಯ ಜೇನುಕುರುಬರ ರಾಮು ಅವರು ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಕೊಡವರ ಕುಣಿತ ಜಾನಪದ ಕಲೆಗೆ ಅಕಾಡೆಮಿ ಪ್ರಶಸ್ತಿ ಘೋಷಿಸಿದೆ.

ಜೆ.ಕೆ.ರಾಮು ಪ್ರತಿಭಾವಂತ ಕಲಾವಿದ. 1966ರಲ್ಲಿ ಪಾಲಿಬೆಟ್ಟ ಸಮೀಪದ ಚೊಟ್ಟೆಪಾರಿ ಗಿರಿಜನ ಹಾಡಿಯಲ್ಲಿ ಜೇನುಕುರಬರ ಕೆಂಚಯ್ಯ ಹಾಗೂ ಗೌರು ಅವರಿಗೆ ದ್ವಿತೀಯ ಪುತ್ರನಾಗಿ ಜನಿಸಿದರು.

7ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ರಾಮು, ತಮ್ಮ ತಂದೆ ಹಾಡುತ್ತಿದ್ದ ಜೇನುಕೊಯ್ಯುವ ಹಾಡು, ಕೋಲಾಟ, ಗೀಜಗನ ಹಾಡು, ಬುಂಡೆಹಾಡುಗಳನ್ನು ಬಾಲ್ಯದಲ್ಲಿಯೇ ಕಲಿತು ಇದೀಗ ಸುಶ್ರಾವ್ಯವಾಗಿ ತಮ್ಮದೇ ಭಾಷೆಯಲ್ಲಿ ಹಾಡುತ್ತಾರೆ. ಇದರ ಜತೆಗೆ ತಾವೆ ಕಟ್ಟಿರುವ ಕಲಾವಿದರ ತಂಡದೊಂದಿಗೆ ಸುಂದರವಾಗಿ ನೃತ್ಯವನ್ನೂ ಮಾಡುತ್ತಾರೆ. ಕೊಳಲು ಇವರಿಗೆ ಅದ್ಭುತವಾಗಿ ಸಿದ್ಧಿಸಿರುವ ಕಲೆ. ಜೇನುಕುಬರ ಹಾಡುಗಳನ್ನು ಗಂಟೆಗಟ್ಟಲೆ ಕೊಳಲಿನ ಮೂಲಕ ಇಂಪಾಗಿ ನುಡಿಸುತ್ತಾರೆ.

ಪ್ರತಿಭಾವಂತ ಮಕ್ಕಳು ಹಾಗೂ ಯುವಕರ ಕಲಾ ತಂಡವನ್ನು ಹೊಂದಿರುವ ರಾಮು ಚೆನ್ನೈ, ಸೇಲಂ, ಮಧುರೆ, ದೆಹಲಿ, ತಿರುವನಂತಪುರ ಮೊದಲಾದ ಕಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಪ್ರದರ್ಶನ ನೀಡಿದ್ದಾರೆ. ಜತೆಗೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಮಹದೇಶ್ವರ ಬೆಟ್ಟದಲ್ಲಿ 2019ರಲ್ಲಿ ಒಂದು ವಾರ ಕಾಲ ಆಯೋಜಿಸಿದ್ದ ಜಾನಪದ ಕಲಾವಿದರ ಶಿಬಿರದಲ್ಲಿಯೂ ಪಾಲ್ಗೊಂಡು ತಮ್ಮ ಕಲೆಯನ್ನು ಪ್ರದರ್ಶನ ಪಡಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಜಾನಪದ ಅಕಾಡೆಮಿ ಆಯೋಜಿಸಿದ್ದ ಜಾನಪದ ಜಾತ್ರೆ, ಗಿರಿಜನ ಹಾಡಿ ಉತ್ಸವ ಮೊದಲಾದ ನೂರಾರು ಕಾರ್ಯಕ್ರಮಗಳಲ್ಲಿ ರಾಮು ಪಾಲ್ಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.