ADVERTISEMENT

ಬಿಜೆಪಿ ಬಣಗಳ ಆಕ್ರೋಶ ಸ್ಫೋಟ

ಉಸ್ತುವಾರಿ ಅಗರ್‌ವಾಲ್, ಬಿವೈವಿ ವಿರುದ್ಧ ಶ್ರೀರಾಮುಲು ಕಿಡಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 19:27 IST
Last Updated 22 ಜನವರಿ 2025, 19:27 IST
<div class="paragraphs"><p>ಬಿಜೆಪಿ ಧ್ವಜ</p></div>

ಬಿಜೆಪಿ ಧ್ವಜ

   

ಬೆಂಗಳೂರು: ಬಿಜೆಪಿಯಲ್ಲಿ ಬಣ ಜಗಳ ಮತ್ತಷ್ಟು ತಾರಕಕ್ಕೆ ಹೋಗಿದ್ದು, ಮಂಗಳವಾರ ರಾತ್ರಿ ನಡೆದ ಪ್ರಮುಖ ನಾಯಕರ ಸಭೆಯಲ್ಲಿ ಇದು ಸ್ಫೋಟಗೊಂಡಿದೆ.

ಇದೇ ಮೊದಲ ಬಾರಿಗೆ ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಸಭೆಯಲ್ಲಿ ಬಯಲಾಗಿದೆ. 

ADVERTISEMENT

ಮಂಗಳವಾರ ರಾತ್ರಿ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪ್ರಮುಖ ನಾಯಕರ ಸಭೆ ಸುದೀರ್ಘವಾಗಿ ಸಭೆ ನಡೆಯಿತು. ಆದರೆ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಹಲವು ನಾಯಕರ ಆಕ್ಷೇಪ ವ್ಯಕ್ತವಾಯಿತು. ವಿಜಯೇಂದ್ರ ಅವರು ಹಲವು ಜಿಲ್ಲೆಗಳಲ್ಲಿ ಏಕಪಕ್ಷೀಯವಾಗಿ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದ್ದಾರೆ. ಪಕ್ಷದ ಇತರ ನಾಯಕರ ಮಾತುಗಳನ್ನು ಕೇಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು. ಬೆಂಗಳೂರು ಉತ್ತರ ಜಿಲ್ಲೆಗೆ ಸಂಬಂಧಿಸಿದಂತೆ ತಾವು ಹೇಳಿದ ಹೆಸರುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮತ್ತು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಆಕ್ಷೇಪ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ವಿಷಯ ಬಂದಾಗ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರವಾಲ್‌ ಅವರು ಸಂಡೂರು ಉಪಚುನಾವಣೆಯಲ್ಲಿ ಸೋಲಿನ ವಿಚಾರ ಪ್ರಸ್ತಾಪಿಸಿ, ಗೆಲುವಿಗೆ ಶ್ರಮಿಸಲಿಲ್ಲ ಎಂದು ಹೇಳಿದ್ದು ಶ್ರೀರಾಮುಲು ಅವರನ್ನು ಕೆರಳಿಸಿತು.

‘ಉಪಚುನಾವಣೆಯಲ್ಲಿ ನಾನು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಯಾರನ್ನು ಬೇಕಾದರೂ ಕೇಳಬಹುದು. ನೀವು ಮಾಡಿದ ಆರೋಪದಿಂದ ಬೇಸರವಾಗಿದೆ. ಡಿ.ವಿ.ಸದಾನಂದಗೌಡ ಅವರು ಇನ್ನೂ ಉಪಚುನಾವಣೆ ಕುರಿತು ವರದಿಯನ್ನೇ ಕೊಟ್ಟಿಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂದು ಯಾವ ಆಧಾರದ ಮೇಲೆ ನನ್ನ ಮೇಲೆ ಆರೋಪ ಮಾಡುತ್ತೀರಿ? ಜನಾರ್ದನ ರೆಡ್ಡಿ ಅವರ ಚಿತಾವಣೆಯಿಂದ ಆರೋಪ ಮಾಡುತ್ತಿದ್ದೀರಿ. ಅಗರ್‌ವಾಲ್ ಉತ್ತರಭಾರತದವರು, ಅವರಿಗೆ ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಿಲ್ಲ ’ ಎಂದು ಶ್ರೀರಾಮುಲು ಏರಿದ ಧ್ವನಿಯಲ್ಲಿ ಹೇಳಿದರು.

‘ಅವರಿಗೇನೊ ಗೊತ್ತಿಲ್ಲ, ಅಧ್ಯಕ್ಷರಾಗಿ ನಿಮಗೆ ಗೊತ್ತಿದೆ. ನೀವು ಕ್ಷೇತ್ರಕ್ಕೆ ಬಂದಿದ್ದೀರಿ. ಈಗ ನೀವು ನನ್ನ ರಕ್ಷಣೆಗೆ ಬರದಿದ್ದರೆ ಹೇಗೆ. ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲ ಎಂದರೆ ಹೇಳಿ. ನಾನು ಪಕ್ಷ ಬಿಡಲು ತಯಾರಿದ್ದೇನೆ. ಆದರೆ, ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹೇಳಿಯೇ ಬಿಡುತ್ತೇನೆ. ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲ’ ಎಂದು ವಿಜಯೇಂದ್ರ ಅವರನ್ನು ಉದ್ದೇಶಿಸಿ ಕಿಡಿ ಕಾರಿದರು.

‘ಮಾಧ್ಯಮದ ಮುಂದೆ ಹೋಗಿ ಎಲ್ಲವನ್ನು ಹೇಳುತ್ತೇನೆ’ ಎಂದು ಎದ್ದಾಗ, ವಿಜಯೇಂದ್ರ ಮತ್ತು ಸಿ.ಟಿ.ರವಿ ಅವರು ಸಮಾಧಾನಪಡಿಸಿದರು.

ಡಿವಿಎಸ್ ನೇತೃತ್ವದಲ್ಲಿ ಒಕ್ಕಲಿಗರ ಸಭೆ

ಪಕ್ಷದಲ್ಲಿ ಬದಲಾವಣೆಯ ತೂಗುಗತ್ತಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರನ್ನು ಕಾಡುತ್ತಿದ್ದು, ಒಕ್ಕಲಿಗರಿಗೆ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಇವೆರಡರಲ್ಲಿ ಯಾವುದಾದರೂ ಒಂದನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಒಕ್ಕಲಿಗ ಶಾಸಕರ ಸಭೆ ನಡೆಯಿತು.

ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ವಿರುದ್ಧ 15 ದಿನಗಳ ಒಳಗೆ ಕ್ರಮ ಕೈಗೊಳ್ಳುವಂತೆ ಹೆಚ್ಚಿನ ಶಾಸಕರು ಒತ್ತಾಯಿಸಿದ್ದೇವೆ. ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ  
ಡಾ. ಶಿವರಾಜ ಪಾಟೀಲ, ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.