ADVERTISEMENT

ಶಿರೂರು ಶ್ರೀ ಸಾವಿನ ಪ್ರಕರಣ: ರಮ್ಯಾ ಶೆಟ್ಟಿ 3 ದಿನದಿಂದ ಪೊಲೀಸ್ ವಶದಲ್ಲಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 6:44 IST
Last Updated 24 ಜುಲೈ 2018, 6:44 IST
ರಮ್ಯಾ ಶೆಟ್ಟಿ
ರಮ್ಯಾ ಶೆಟ್ಟಿ    

ಮಂಗಳೂರು: ಉಡುಪಿ ಜಿಲ್ಲೆಯ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯವರ ನಿಕಟವರ್ತಿಯಾಗಿದ್ದ ರಮ್ಯಾ ಶೆಟ್ಟಿ ಎಂಬ ಮಹಿಳೆ ಮೂರು ದಿನದಿಂದ ಉಡುಪಿ ಪೊಲೀಸರ ವಶದಲ್ಲಿ ಇರುವುದು ಖಚಿತವಾಗಿದೆ.

ರಮ್ಯಾ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವೇಣೂರು ಬಳಿ ಬೆಳ್ತಂಗಡಿ ಪೊಲೀಸರು ಭಾನುವಾರ ಮಧ್ಯಾಹ್ನ ವಶಕ್ಕೆ ಪಡೆದು ಉಡುಪಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಇದನ್ನು ದಕ್ಷಿಣ ಕನ್ನಡ ಪೊಲೀಸರು ಖಚಿತಪಡಿಸಿದ್ದಾರೆ.
ಸ್ವಾಮೀಜಿ ಸಾವಿನ‌ ಕುರಿತು ರಮ್ಯಾ ಶೆಟ್ಟಿಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು. ಆದರೆ, ಅಂದಿನಿಂದಲೂ ಆಕೆ ನಾಪತ್ತೆಯಾಗಿದ್ದರು. ಮಹಿಳೆಯ ಪತ್ತೆಗಾಗಿ ಉಡುಪಿ ಪೊಲೀಸರು ನೆರೆಯ ಜಿಲ್ಲೆಗಳ ಪೊಲೀಸರ ನೆರವು ಕೋರಿದ್ದರು.

ಭಾನುವಾರ ಮಧ್ಯಾಹ್ನ ಅಳದಂಗಡಿಯ ದೇವಸ್ಥಾನವೊಂದರ ಬಳಿ ರಮ್ಯಾ ಇದ್ದ ಕಾರಿನ ಚಕ್ರ ಪಂಕ್ಚರ್ ಆಗಿತ್ತು. ಪಂಕ್ಚರ್ ಹಾಕಿಸಲು ಯತ್ನಿಸುತ್ತಿದ್ದಾಗ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದರು. ಮಹಿಳೆಯ ಜೊತೆ ಕಾರಿನಲ್ಲಿ ನಾಲ್ವರು ಇದ್ದರು. ರಮ್ಯಾ ಬುರ್ಖಾ ಧರಿಸಿದ್ದರು ಎಂದು ಗೊತ್ತಾಗಿದೆ.

ADVERTISEMENT

ರಮ್ಯಾ ಶೆಟ್ಟಿ ಸುಳ್ಯ ತಾಲ್ಲೂಕಿನವರು. ಕೆಲವು ವರ್ಷಗಳಿಂದ ಸ್ವಾಮೀಜಿಗೆ ಆಪ್ತರಾಗಿದ್ದರು. ಈ ಮಹಿಳೆಯೇ ಸ್ವಾಮೀಜಿಗೆ ಊಟ ಪೂರೈಸುತ್ತಿದ್ದರು ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.