ADVERTISEMENT

ಮೋದಿ, ಬಿಎಸ್‌ವೈಯಿಂದ ಲೂಟಿ: ಸುರ್ಜೇವಾಲ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 19:31 IST
Last Updated 17 ಫೆಬ್ರುವರಿ 2021, 19:31 IST
ರಣದೀಪ್ ಸಿಂಗ್ ಸುರ್ಜೇವಾಲ
ರಣದೀಪ್ ಸಿಂಗ್ ಸುರ್ಜೇವಾಲ   

ಬೆಂಗಳೂರು: ‘ದಿನೇ ದಿನೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಿದೆ. ತೈಲದ ಮೇಲಿನ ಸೆಸ್‌ನಿಂದ 2020-21ರ ಆರ್ಥಿಕ ವರ್ಷದಲ್ಲಿ ₹ 20 ಲಕ್ಷ ಕೋಟಿ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಉದ್ದೇಶದಿಂದ ಮೋದಿ ಸರ್ಕಾರ ಜನರ ಮೇಲೆ ಇನ್ನಷ್ಟು ಹೊರೆ ಹೊರಿಸುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಮಧ್ಯಮ ವರ್ಗಕ್ಕೆ ಹೊರೆಯಾಗುವ ರೀತಿ ಒಂಬತ್ತು ದಿನಗಳಿಂದ ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಮೋದಿಯವರ ಲೂಟಿ ಕೊನೆಯಾಗಬೇಕು. ಯಡಿಯೂರಪ್ಪನವರ ತೆರಿಗೆ ವಸೂಲಿಯೂ ಕೊನೆಯಾಗಬೇಕು’ ಎಂದರು.

‘ಅಡುಗೆ ಅನಿಲ ದರ ₹ 770 ದಾಟುತ್ತಿದೆ. ಎರಡೂವರೆ ತಿಂಗಳಲ್ಲಿ ₹ 175 ಹೆಚ್ಚಾಗಿದೆ. ಎಲ್ಲ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಜನ ಹೇಗೆ ಬದುಕಬೇಕು’ ಎಂದು ಅವರು ಪ್ರಶ್ನಿಸಿದರು.

ADVERTISEMENT

ತಮ್ಮ ಮನೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಶಾಸಕ ಅಖಂಡ‌ ಶ್ರೀನಿವಾಸ ಮೂರ್ತಿ, ಮಾಜಿ ಮೇಯರ್‌ ಸಂಪತ್‌ರಾಜ್‌ ವಿರುದ್ದ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸುರ್ಜೇವಾಲ, ‘ಈ ವಿಚಾರಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಯಾರೇ ಆದರೂ ಬಹಿರಂಗವಾಗಿ ಮಾತನಾಡಬಾರದು. ಅದು ಅವರ ಮತ್ತು ಪಕ್ಷದ ಏಳಿಗೆಗೆ ಒಳ್ಳೆಯದಲ್ಲ’ ಎಂದರು.

‘ಮುಖ್ಯಮಂತ್ರಿ ವಿರುದ್ಧ ಅವರದ್ದೇ ಪಕ್ಷದ ಶಾಸಕ ಆರೋಪ ಮಾಡಿದರೆ ಬಿಜೆಪಿಯಂತೆ ನಮ್ಮ ಪಕ್ಷ ನೋಟಿಸ್ ನೀಡುವುದಿಲ್ಲ. ಶಾಸಕ ಹಗರಣ ಬಯಲಿಗೆ ಎಳೆದರೆ ಆ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನಿಸಬೇಕಿತ್ತು. ಅದರ ಬದಲು ಬಿಜೆಪಿ ವರಿಷ್ಠರು ಶಾಸಕರಿಗೆ ನೋಟಿಸ್ ನೀಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.