ADVERTISEMENT

ರಂಗನಾಯಕಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 3:26 IST
Last Updated 10 ಜೂನ್ 2019, 3:26 IST
   

ಬೆಂಗಳೂರು: ಹಿರಿಯ ರಂಗಭೂಮಿ ನಟಿ ರಂಗನಾಯಕಮ್ಮ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ರಂಗನಾಯಕಮ್ಮ ಅವರಿಗೆ 80 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿಈಚೆಗೆ ಮೈಸೂರಿನ ತಮ್ಮ ಪುತ್ರಿಯ ಮನೆಯಲ್ಲಿದ್ದರು. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದ ಅವರಿಗೆ ಇತ್ತೀಚೆಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ರಂಗನಾಯಕಮ್ಮ ಅವರು ನಾಟಕ ಕಂಪನಿಗಳಲ್ಲಿ ಮ್ಯಾನೇಜರ್‌ ಆಗಿದ್ದನಂಜಪ‍್ಪ ಎಂಬುವವರನ್ನು ವರಿಸಿದ್ದರು. ವೃತ್ತಿ ರಂಗಭೂಮಿಯಲ್ಲಿ ನಂಜಪ್ಪ ಅವರೂ ಖ್ಯಾತರೇ. 12 ವರ್ಷಗಳ ಹಿಂದೆ ನಂಜಪ್ಪ ಅವರೂ ನಿಧರಾಗಿದ್ದಾರೆ. ದಂಪತಿಗೆ ಒಬ್ಬ ಮಗಳಿದ್ದು, ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ.

ADVERTISEMENT

ರಂಗನಾಯಕಮ್ಮ ಅವರು ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ಹೊನ್ನಪ್ಪ ಭಾಗವತರ್, ಶ್ರೀಕಂಠಮೂರ್ತಿ, ಸುಳ್ಳ ದೇಸಾಯಿ, ಮಹಾಂತೇಶ ಶಾಸ್ತ್ರಿ, ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಕಂಪನಿಗಳಲ್ಲಿ 60ಕ್ಕೂ ಹೆಚ್ಚು ವರ್ಷಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ವೃತ್ತಿ ರಂಗಭೂಮಿಗೆ ರಂಗನಾಯಕಮ್ಮಸಲ್ಲಿಸಿದ್ದ ಸೇವೇಯನ್ನು ಪರಿಗಣಿಸಿ 2014ರಲ್ಲಿ ಅವರಿಗೆ ಗುಬ್ಬಿ ರಣ್ಣ ಪ್ರಶಸ್ತಿ ನೀಡಲಾಗಿತ್ತು.

ರಂಗನಾಯಕಮ್ಮ ಅವರ ಮೂಲ ಹೆಸರು ನಿರ್ಮಲಾ. ಆದರೆ, ಸಣ್ಣ ವಯಸ್ಸಿಗೆ ರಂಗಭೂಮಿಗೆ ಕಾಲಿಟ್ಟ ಅವರ ನಟನಾ ಚಾತುರ್ಯ ಕಂಡು ಸುಬ್ಬಯ್ಯ ನಾಯ್ಡು ಅವರು ರಂಗನಾಯಕಮ್ಮ ಎಂದು ಕರೆದಿದ್ದರು. ಮುಂದೆ ಅದೇ ಅವರ ನಿಜವಾದ ಹೆಸರಾಗಿ ಉಳಿಯಿತು. ರಂಗನಾಯಕಮ್ಮ ಅವರು ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಅವರ ಸೋದರಿಯೂ ಹೌದು.

ಇಂದು ಮಧ್ಯಾಹ್ನ ಮೈಸೂರಿನಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.