ADVERTISEMENT

ದೈವಗಳ ಅವಹೇಳನ ಆರೋಪ: ನಟ ರಣವೀರ್‌ ಸಿಂಗ್ ಅರ್ಜಿ ವಿಚಾರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 15:45 IST
Last Updated 23 ಫೆಬ್ರುವರಿ 2026, 15:45 IST
   

ಬೆಂಗಳೂರು: ‘ಕಾಂತಾರ ಚಾಪ್ಟರ್‌-1’ ಚಿತ್ರದ ದೈವಪಾತ್ರಗಳ ಅವಹೇಳನ ಮಾಡಿದ ಆರೋಪದಡಿ ತಮ್ಮ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ರಣವೀರ್‌ ಸಿಂಗ್‌ (41) ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠಲ್ಲಿ ಮಂಗಳವಾರ (ಫೆ.24) ವಿಚಾರಣೆಗೆ ನಿಗದಿಯಾಗಿದೆ. ಸೋಮವಾರವಷ್ಟೇ ರಣವೀರ್‌ ಸಿಂಗ್‌ ಪರ ವಕೀಲರು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಹಾಜರಾಗಿ ಅರ್ಜಿಯ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕೋರಿದ್ದರು.

ಪ್ರಕರಣವೇನು?: ಗೋವಾದಲ್ಲಿ 2025ರ ನವೆಂಬರ್ 28ರಂದು ‘ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ ಸಮಾರಂಭ ಜರುಗಿತ್ತು. ಈ ಸಂದರ್ಭದಲ್ಲಿ ರಣವೀರ್‌ ಸಿಂಗ್‌, ‘ಕಾಂತಾರ ಚಾಪ್ಟರ್‌-1’ ಕುರಿತು ಮಾತನಾಡಿದ್ದರು.

ADVERTISEMENT

ತಮ್ಮ ಮಾತುಗಳಲ್ಲಿ ಅವರು, ‘ಕರಾವಳಿ ಕರ್ನಾಟಕದ ಪಂಜುರ್ಲಿ, ಗುಳಿಗ ದೈವಗಳ ದೈವೀಕ ಅಭಿವ್ಯಕ್ತಿಯನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಣೆ ಮಾಡಿ ತೋರಿಸಿದ್ದಾರೆ. ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ್ದಾರೆ. ಹಾಗಾಗಿ, ರಣವೀರ್ ಸಿಂಗ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ನಗರದ ವಕೀಲ ಪ್ರಶಾಂತ್‌ ಮೆಥಲ್‌ 1ನೇ ಹೆಚ್ಚುವರಿ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಇದರನ್ವಯ ಹೈಗ್ರೌಂಡ್ಸ್‌ ಠಾಣಾ ಪೊಲೀಸರು, ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್‌) ಕಲಂ 196, 299 ಮತ್ತು 302ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗಲು ರಣವೀರ್‌ ಸಿಂಗ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.