ADVERTISEMENT

ರನ್ಯಾ ರಾವ್‌ ಪ್ರಕರಣ: ಗೃಹ ಸಚಿವರಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 9:38 IST
Last Updated 11 ಮಾರ್ಚ್ 2025, 9:38 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ತುರ್ತಾಗಿ ತಮ್ಮ ಕಚೇರಿಗೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರ ನಟಿ ರನ್ಯಾ ರಾವ್‌ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿತ್ತು. ಗೃಹ ಸಚಿವರು ಸದನದಲ್ಲಿ ಹಾಜರಿದ್ದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ವಿಧಾನಸಭೆಯ ಮೊಗಸಾಲೆಯಲ್ಲಿರುವ ತಮ್ಮ ಕಚೇರಿಗೆ ಬಂದರು. ತುರ್ತಾಗಿ ಅಲ್ಲಿಗೆ ಬರುವಂತೆ ಪರಮೇಶ್ವರ ಅವರಿಗೆ ಸಂದೇಶ ಕಳುಹಿಸಿದರು.

ಸದನದಿಂದ ಹೊರ ಹೋದ ಗೃಹ ಸಚಿವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸುಮಾರು ಹತ್ತು ನಿಮಿಷ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರೊಂದಿಗೆ ಕೆಲವೇ ಮಂದಿ ಇದ್ದರು.

ADVERTISEMENT

‘ರನ್ಯಾ ರಾವ್‌ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜಕೀಯ ನಂಟಿನ ಕುರಿತು ತೀವ್ರ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರದ ಹಂತದಲ್ಲಿ ಆಗಿರಬಹುದಾದ ಲೋಪಗಳ ಬಗ್ಗೆ ಮುಖ್ಯಮಂತ್ರಿಯವರು ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.