ನಟಿ ರನ್ಯಾ ರಾವ್
ಬೆಂಗಳೂರು: ನಟಿ ಹರ್ಷವರ್ಧಿನಿ ರನ್ಯಾ ರಾವ್ ಮತ್ತು ತರುಣ್ ರಾಜು ಅವರು ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಲು ಅಮೆರಿಕದ ಪಾಸ್‌ಪೋರ್ಟ್ ಬಳಸುತ್ತಿದ್ದರು ಎಂಬುದನ್ನು ರೆವೆನ್ಯೂ ಗುಪ್ತಚರ
ನಿರ್ದೇಶನಾಲಯದ (ಡಿಆರ್‌ಐ) ತನಿಖಾ ತಂಡ ಪತ್ತೆ ಮಾಡಿದೆ.
ತರುಣ್ ಬಳಿ ಅಮೆರಿಕದ ಪಾಸ್‌ಪೋರ್ಟ್ ಇದೆ. ಇದನ್ನು ಹೊಂದಿರುವವರು ಜಿನೀವಾಕ್ಕೆ ತೆರಳಲು ಪ್ರತ್ಯೇಕ ವೀಸಾ ಅಗತ್ಯವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಜಿನೀವಾಕ್ಕೆ ತೆರಳುತ್ತಿರುವುದಾಗಿ ತಪಾಸಣೆ ವೇಳೆ ಸುಳ್ಳು ಮಾಹಿತಿ ನೀಡಿ, ನಂತರ ಕಣ್ತಪ್ಪಿಸಿ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.
ದುಬೈನಲ್ಲಿ ಪೂರೈಕೆದಾರರಿಂದ ಖರೀದಿಸಿದ್ದ ಚಿನ್ನವನ್ನು ಯಾವುದೇ ನಿರ್ಬಂಧವಿಲ್ಲದೇ, ಜಿನೀವಾಕ್ಕೆ ಕೊಂಡೊಯ್ಯಬಹುದು. ಈ ಅವಕಾಶ ಬಳಸಿಕೊಂಡ ರನ್ಯಾ, ತಮ್ಮ ಬಳಿ ಇದ್ದ ಚಿನ್ನ ತರುಣ್‌ಗೆ ಸೇರಿದ್ದು ಎಂದು ಘೋಷಣೆ ಮಾಡುತ್ತಿದ್ದರು. ದುಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆಯೊಡ್ಡಿದ ಸಂದರ್ಭಗಳಲ್ಲಿ ಜಿನೀವಾಕ್ಕೆ ತೆರಳುತ್ತಿರುವುದಾಗಿ ಹೇಳುತ್ತಿದ್ದರು. ಆದರೆ, ಜಿನೀವಾಕ್ಕೆ ಹೋಗುತ್ತಿರಲಿಲ್ಲ ಎಂಬ ಮಾಹಿತಿ, ರನ್ಯಾ ಅವರ ಪ್ರವಾಸದ ದಾಖಲೆಯಿಂದ ಗೊತ್ತಾಗಿದೆ.
ರನ್ಯಾ ಬಂಧನದ ಬಳಿಕ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪತ್ತೆಯಾದ ದಾಖಲೆಗಳಲ್ಲಿ, ದುಬೈ ಕಸ್ಟಮ್ಸ್ ಅಧಿಕಾರಿಗಳಿಗೆ ಅವರು ನೀಡಿರುವ ಮಾಹಿತಿ ಲಭ್ಯವಾಗಿದೆ. ನಟಿ ದುಬೈನಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆಯುವ ಉದ್ದೇಶದಿಂದಲೇ ಜಿನೀವಾಕ್ಕೆ ವಿಮಾನ ಟಿಕೆಟ್‌ಗಳನ್ನು ಖರೀದಿಸಿದ್ದಾರೆಯೇ ಎಂಬುದನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.
ಮಾರ್ಚ್ 3ರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಹೊರಟ ರನ್ಯಾ, ಪತಿ ಜತಿನ್ ಹುಕ್ಕೇರಿ ಅವರ ಕ್ರೆಡಿಟ್ ಕಾರ್ಡ್ ಬಳಸಿ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಹಾಗಾಗಿ ಜತಿನ್ ವಿಚಾರಣೆ ನಡೆಸಿರುವ ತನಿಖಾ ತಂಡ, ರನ್ಯಾ–ತರುಣ್ ಅವರ ಹಣಕಾಸು ವ್ಯವಹಾರ ಮತ್ತು ಚಿನ್ನದ ವ್ಯಾಪಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ಅಧಿಕಾರಿಗಳಿಗೆ ಸಿಕ್ಕಿ ಬೀಳುವ ಭಯದಿಂದ ಆರೋಪಿಗಳು ಯಾವಾಗಲೂ ಒಟ್ಟಿಗೆ ದುಬೈ ಪ್ರವಾಸ ಮಾಡುತ್ತಿರಲಿಲ್ಲ. ರನ್ಯಾ ದುಬೈಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ತರುಣ್ ಸಹ ಅಲ್ಲಿಗೆ ಪ್ರತ್ಯೇಕವಾಗಿ ಭೇಟಿ ನೀಡುತ್ತಿದ್ದರು. ವಿಮಾನ ನಿಲ್ದಾಣದ ತಪಾಸಣಾ ವಲಯದಲ್ಲಿ ಒಟ್ಟಿಗೆ ಹಾಜರಾಗುತ್ತಿದ್ದರು. ನಂತರ ರನ್ಯಾ ಬೆಂಗಳೂರಿನತ್ತ ಹೊರಟರೆ, ತರುಣ್ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ರನ್ಯಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಗರದ ಸೆಷನ್ಸ್ ನ್ಯಾಯಾಲಯ ಮಾರ್ಚ್ 19ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆ ವೇಳೆ ಆಕ್ಷೇಪಣೆ ಸಲ್ಲಿಸುವಂತೆ ಡಿಆರ್‌ಐ ಪರ ವಕೀಲರಿಗೆ ನ್ಯಾಯಾಧೀಶರು ಸೂಚನೆ ನೀಡಿದರು. ಪ್ರಕರಣದ ಎರಡನೇ ಆರೋಪಿಯಾಗಿರುವ ತರುಣ್ ರಾಜು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆರ್ಥಿಕ ಅಪರಾಧ ಪ್ರಕರಣಗಳ ವಿಶೇಷ ನ್ಯಾಯಾಲಯವು ಮಂಗಳವಾರಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.