ಬೆಂಗಳೂರು: ಚಿನ್ನ ಕಳ್ಳಸಾಗಣೆ ಮಾಡುವ ಉದ್ದೇಶದಿಂದಲೇ ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಅವರು 31 ಬಾರಿ ದುಬೈಗೆ ಪ್ರಯಾಣ ಮಾಡಿದ್ದರು ಎಂದು ರೆವೆನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹೇಳಿದೆ.
ಇಬ್ಬರು ಅರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ಡಿಆರ್‌ಐ ಸಲ್ಲಿಸಿರುವ ದಾಖಲೆಗಳಲ್ಲಿ ಈ ಮಾಹಿತಿ ಇದೆ.
‘ರನ್ಯಾ ಮತ್ತು ತರುಣ್ ಅವರು ಅತ್ಯಂತ ವ್ಯವಸ್ಥಿತವಾಗಿ ಚಿನ್ನ ಕಳ್ಳಸಾಗಣೆ ನಡೆಸಿದ್ದಾರೆ. ಇಬ್ಬರೂ 25 ಬಾರಿ ಒಂದೇ ವಿಮಾನದಲ್ಲಿ ಬೇರೆ–ಬೇರೆ ಸೀಟುಗಳಲ್ಲಿ ದುಬೈಗೆ ಹೋಗಿದ್ದಾರೆ. ಅದೇ ದಿನ ಬೆಂಗಳೂರಿಗೆ ವಾಪಸಾಗಿದ್ದಾರೆ. ತರುಣ್ ಚಿನ್ನವನ್ನು ವಿಮಾನ ನಿಲ್ದಾಣದೊಳಕ್ಕೆ ತಂದು, ರನ್ಯಾಗೆ ಹಸ್ತಾಂತರಿಸಿದ್ದಾರೆ. ರನ್ಯಾ ಅದನ್ನು ಬೆಂಗಳೂರಿಗೆ ತಂದು ಸಾಹಿಲ್ ಸಖಾರಿಯಾ ಜೈನ್‌ಗೆ ಹಸ್ತಾಂತರಿಸಿದ್ದಾರೆ’ ಎಂದು ಡಿಆರ್‌ಐ ಹೇಳಿದೆ.
‘ಆರಂಭದಲ್ಲಿ ರನ್ಯಾ ಅವರು ಕ್ರೆಡಿಟ್ ಕಾರ್ಡ್‌ಗಳ ಮೂಲಕವೇ ವಿಮಾನಯಾನ ಟಿಕೆಟ್ ಖರೀದಿಸಿದ್ದಾರೆ. ತಮ್ಮ ಮದುವೆಯ ನಂತರ ಕ್ರೆಡಿಟ್ ಕಾರ್ಡ್ ಬಳಕೆ ನಿಲ್ಲಿಸಿದ್ದಾರೆ. ಕಳ್ಳಸಾಗಣೆಯ ಚಿನ್ನವನ್ನು ಮಾರಾಟ ಮಾಡಿ ಸಾಹಿಲ್ ತಂದುಕೊಟ್ಟ ಹಣದಲ್ಲಿ, ಸ್ವಲ್ಪ ಭಾಗವನ್ನು ತರುಣ್ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದರು. ಆ ಖಾತೆ ಮೂಲಕ ಟಿಕೆಟ್ ಖರೀದಿಸಲಾಗುತ್ತಿತ್ತು’ ಎಂದು ಡಿಆರ್‌ಐ ಹೇಳಿದೆ.
ಲ್ಯಾಪ್‌ಟಾಪ್–ಮೊಬೈಲ್ ಪರಿಶೀಲನೆ: ‘ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ರನ್ಯಾ ರಾವ್ ಮತ್ತು ತರುಣ್ ರಾಜು ಅವರ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನಲ್ಲಿ ಹಲವು ಮಾಹಿತಿ ದೊರೆತಿವೆ. ಆದರೆ ಕೆಲವು ಮಾಹಿತಿಗಳನ್ನು ಇಬ್ಬರೂ ಆಗಿಂದಾಗ್ಗೆ ಅಳಿಸಿ ಹಾಕಿದ್ದಾರೆ. ಅವುಗಳನ್ನು ಮರು ಪಡೆಯಲು ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ವಿಧಿ–ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.