ಅತ್ಯಾಚಾರ
ಬೆಂಗಳೂರು: ರಾಜ್ಯದಲ್ಲಿ ಐದು ವರ್ಷಗಳಲ್ಲಿ 2,803 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, 75 ಪ್ರಕರಣಗಳಲ್ಲಷ್ಟೇ ಅಪರಾಧ ಸಾಬೀತಾಗಿ ಶಿಕ್ಷೆಯಾಗಿದೆ. ಸಾಕ್ಷ್ಯಾಧಾರಗಳ ಕೊರತೆ, ಸುಳ್ಳು ಪ್ರಕರಣಗಳು, ತನಿಖೆ ಹಾಗೂ ವಿಚಾರಣೆ ವಿಳಂಬದಿಂದ 1,932 ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆ ಆಗಿದೆ.
ಈ ಅವಧಿಯಲ್ಲಿ 2,007 ಪ್ರಕರಣಗಳ ವಿಚಾರಣೆ ರಾಜ್ಯದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಪೂರ್ಣಗೊಂಡಿದೆ. 796 ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಅತ್ಯಾಚಾರ ಪ್ರಕರಣಗಳು ಏರಿಕೆ ಆಗುತ್ತಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ವಿಚಾರಣೆ ಪೂರ್ಣಗೊಂಡಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡ 3.73ರಷ್ಟು ಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆಯಾಗಿದೆ.
ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ 714 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣಗಳಲ್ಲಿ 884 ಆರೋಪಿಗಳು ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ಪತ್ತೆ ಆಗಿದೆ. ಒಟ್ಟು 812 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಅವಧಿಯಲ್ಲಿ 49 ಮಂದಿಗಷ್ಟೇ ಶಿಕ್ಷೆಯಾಗಿದೆ. 104 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಯಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ವರದಿ ಆಗಿವೆ.
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ (ಎನ್‌ಸಿಆರ್‌ಬಿ) 2023ರಲ್ಲಿ ಪ್ರಕಟಿಸಿದ ‘ಕ್ರೈಂ ಇನ್ ಇಂಡಿಯಾ’ ಅಂಕಿಅಂಶದ ಪ್ರಕಾರ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ರಾಜ್ಯವು ದೇಶದಲ್ಲಿ 17ನೇ ಸ್ಥಾನದಲ್ಲಿತ್ತು.
‘ಕೃತ್ಯ ನಡೆದು 24 ಗಂಟೆಯ ಒಳಗೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರ ಸಂಗ್ರಹಿಸಬೇಕು. ಆದರೆ, ಹಲವು ಪ್ರಕರಣಗಳಲ್ಲಿ ತ್ವರಿತ ಕ್ರಮ ಆಗುತ್ತಿಲ್ಲ. ಇದರಿಂದ ಆರೋಪಿಗಳು ಸುಲಭವಾಗಿ ಪ್ರಕರಣದಿಂದ ಹೊರ ಬರುತ್ತಿದ್ದಾರೆ’ ಎಂದು ವಕೀಲರೊಬ್ಬರು ಹೇಳಿದರು.
‘ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಹಲವು ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಸಹಾಯವಾಣಿ (1091) ಹಾಗೂ ಮಕ್ಕಳ ಸಹಾಯವಾಣಿಗಳು (1098) ರಾಜ್ಯದಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ವರ್ಷ ಮಕ್ಕಳ ಸಹಾಯವಾಣಿಗೆ 11 ಸಾವಿರ ಕರೆಗಳು ಬರುತ್ತಿವೆ. ಈ ಕರೆಗಳಿಗೆ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಒಟ್ಟು 1050 ‘ಮಹಿಳಾ ಸಹಾಯ ಡೆಸ್ಕ್ ಸ್ಥಾಪಿಸಲಾಗಿದೆ. ಈ ಡೆಸ್ಕ್‌ಗಳು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ.ಜಿ.ಪರಮೇಶ್ವರ, ಗೃಹ ಸಚಿವ
‘ಅತ್ಯಾಚಾರ ಪ್ರಕರಣಗಳು ಬಹುತೇಕ ಪರಿಚಯಸ್ಥರು, ಸ್ನೇಹಿತರು ಹಾಗೂ ಸಂಬಂಧಿಕರಿಂದ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಪ್ರಕರಣಗಳಲ್ಲಿ ಸರಿಯಾದ ಸಾಕ್ಷ್ಯ ಸಂಗ್ರಹಿಸುವಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಕ್ರಮ ಕೈಗೊಳ್ಳುತ್ತಲೇ ಇದೆ. ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆ ಅತಿಮುಖ್ಯ. ಕೆಲವು ಪ್ರಕರಣಗಳಲ್ಲಿ ಒತ್ತಡ ಹಾಗೂ ಭೀತಿಯಿಂದ ಸಂತ್ರಸ್ತೆಯರು ಹೇಳಿಕೆ ಬದಲಿಸುತ್ತಾರೆ. ಅಲ್ಲದೇ ನ್ಯಾಯಾಧೀಶರ ಎದುರು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿ ಸ್ವಯಂ ಹೇಳಿಕೆ ದಾಖಲಿಸಲು ಕೆಲವರು ಹಿಂದೇಟು ಹಾಕುತ್ತಾರೆ. ಇದರಿಂದ ತನಿಖೆಗೆ ತೊಂದರೆ ಆಗುತ್ತಿದೆ. ಆರೋಪಿಗಳು ಖುಲಾಸೆಗೊಳ್ಳುತ್ತಾರೆ’ ಎಂದು ಅವರು ಹೇಳುತ್ತಾರೆ.
‘ಸುರಕ್ಷತಾ ದ್ವೀಪ’ ಸ್ಥಾಪನೆ
‘ಮಹಿಳಾ ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ 241 ಹೊಯ್ಸಳ ವಾಹನಗಳು ಕಾರ್ಯಾಚರಿಸುತ್ತಿವೆ. ‘ಸೇಫ್ ಸಿಟಿ’ ಯೋಜನೆ ಅಡಿ 7500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ 30 ಸ್ಥಳಗಳಲ್ಲಿ ‘ಸುರಕ್ಷತಾ ದ್ವೀಪ’ (ಸೇಫ್ಟಿ ಐಲ್ಯಾಂಡ್) ಸ್ಥಾಪಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಗಳಲ್ಲಿ 35 ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳನ್ನೂ ಸ್ಥಾಪಿಸಲಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.